ನೆನಪು ನಿರಂತರ
ಕಂಗಾಲಾಗಿ ಅಯ್ಯ್ಯ್ಯೋ ಎನ್ನುತ್ತಾ ದಣಿವನ್ನೆಲ್ಲ ಮರೆತು ಗಾಢನಿದ್ರೆಗೆ ಶಪಿಸುತ್ತಾ ಹಾಸಿಗೆಯಿಂದ ಎದ್ದು ಕುಳಿತ ಸಾವತ್ರಮ್ಮನವರು,ಅದಾಗಲೆ ಮುಂಜಾನೆ ಏಳೂವರೆ ಗಂಟೆಯನ್ನು ಗಂಭೀರವಾಗಿತೋರಿಸುತ್ತಾ ಸುಣ್ಣದ ಗೋಡೆಗೆ ನೇತುಬಿದ್ದ ಗಡಿಯಾರವನ್ನು ನೋಡುತ್ತಲೇ , ಪುಟ್ಟುವಿನ ಶಾಲೆ, ಆತನ ಬೆಳಗ್ಗೆಯ ತಿಂಡಿ, ಮಧ್ಹ್ಯಾನ್ಹದ ಬುತ್ತಿ, ಸ್ನಾನಕ್ಕೆ ಬಿಸನೀರು, ಕೊಟ್ಟಿಗೆಯಲ್ಲಿ ಅರ್ಧ ರಾತ್ರಿಯಿಂದಒಂದೇ ಸಮನೇ ಬೊಬ್ಬಿಡುತ್ತಿದ್ದ ಗಬ್ಬದ ಹಸುವಿಗೆ ಹುಲ್ಲು, ಶಾಲೆಗೆ ತಡವಾದರೆ ಪುಟ್ಟುವಿನ ಸಿಟ್ಟು ಹಠಮಾರಿತನ ಇನ್ನಿತರ ನಿತ್ಯ ಕಾರ್ಯಗಳೆಲ್ಲ ಒಮ್ಮೆಲೆ ನೆನಪಾಗಿ ತುರುಬನ್ನು ಹಿಂದಕ್ಕೆ ಸಿಕ್ಕಿಸಿಕೊಳ್ಳುತ್ತಾ,ಒದ್ದೆ ಕಟ್ಟಿಗೆಗಳು ಬೇಗ ಉರೀಲಪ್ಪ ಈವತ್ತಾದರು ಎಂದು ಎಣಿಸಿಕೊಳ್ಳುತ್ತಾ ಅಡುಗೆ ಮನೆಗೆ ನುಗ್ಗಿದರು.
ಕಳೆದ ವಾರ ಅಚಾನಕ್ಕಾಗಿ ಸುರಿದ ಮಳೆಗೆ ಕೂಡಿಟ್ಟ ಸೌದೆಯೆಲ್ಲ ಒದ್ದೆಯಾಗಿ, ಬೆಳಿಗ್ಗೆ ಬೆಂಕಿ ಸ್ರುಷ್ಟಿಸುವುದು ಯಮಸಾಹಸಾಗಿತ್ತು. ಯತಾನುಶಕ್ತಿ ಸೀಮೆಎಣ್ಣೆ ಸುರಿದು ಕಡ್ಡಿಗೀರಿ ಇಟ್ಟೊಡನೆ ಬುಗ್ಗನೇಹತ್ತಿಕೊಳ್ಳುತ್ತಿದ್ದ ಬೆಂಕಿ, ಕಟ್ಟಿಗೆಯನ್ನು ಆವರಿಸದೇ ಕೇವಲ ಸೀಮೆಎಣ್ಣೆಯನ್ನು ಮಾತ್ರಾ ಸುಟ್ಟು ನಾಶವಾಗಿ ಕಮಟು ಹೊಗೆಯನ್ನು ಸ್ರುಷ್ಟಿಸುತ್ತಿತ್ತು. ಛಲ ಬಿಡದ ಸಾವಿತ್ರಮ್ಮನವರು ಉರುಟುಕೊಪ್ಪೆಯಿಂದಊದಿ ಊದಿ ಬೆಂಕಿ ಹತ್ತಿಸುವ ಹರಸಾಹಸದ ನಡುವೆಯು, ‘ಈವತ್ತು ಬೆಳಗಾತ ಮುಖಕ್ಕೆ ನೀರು ಕೂಡ ಹಾಕಿಲ್ಲ , ಇಷ್ಟು ದಿನ ಹೊಸಲು ಒರೆಸಿ ಕುಂಕುಮ ಹಚ್ಚಿ , ತುಳಸಿ ಕಟ್ಟೆಗೆ ನೀರು ಹಾಕಿ ಹೂ ಮುಡಿಸಿದೇವರಿಗೆ ದೀಪ ಹಚ್ಚದೇ ಅಡುಗೆ ಮನೆಗೆ ಕಾಲಿಟ್ಟವಲಳಲ್ಲ, ಈವತ್ತ್ ಎನಾಯ್ತಪ್ಪ ದೇವ್ರೇ ನಂಗೆ’ ಎಂದು ತಮ್ಮ ದೈನಂದಿನ ದೈವಕಾರ್ಯದಿಂದ ಎಡವಿದ್ದಕ್ಕೆ ಬೇಸರಗೊಳ್ಳುತ್ತಲೇ , ಅದಾಗಲೇ ಅಡುಗೆಮನೆಒಲೆಯಲ್ಲಿ ಸಿದ್ದವಾಗಿದ್ದ ಕೆಂಡಗಳಲ್ಲಿ ಸ್ವಲ್ಪ ಮಾತ್ರವನ್ನು ತೆಗೆದು , ಒಡೆದ ಮಡಕೆಯ ತುಂಡೊಂದರೊಳಗೆ ಕೆಂಡಗಳನ್ನು ಪೇರಿಸಿ ಬಚ್ಚಲು ಒಲೆಗೆ ಬೆಂಕಿ ಹತ್ತಿಸಲು ಆಕಡೆ ಓಡಿದವರು ಬಚ್ಚಲು ಒಲೆಯ ಬೆಂಕಿಮಾಡುತ್ತಲೆ ‘ ಅಯ್ಯೋ. ಈ ಪುಟ್ಟು ಇನ್ನೂ ಎದ್ದಿಲ್ವಲ್ಲ ಈವತ್ತು, ತಡ ಆದ್ರೆ ಯಾಕೆ ಏಳ್ಸಿಲ್ಲ ಅಂತ ಗಲಾಟೆ ಬೇರೆ ಅವ್ನದ್ದು ಮೊದಲು ಅವನನ್ನ ಏಳ್ಸಿ ಬರ್ತೀನಿ, ಅವನು ಎದ್ದು ಹಲ್ಲುಜ್ಜವಷ್ಟರಲ್ಲಿ ಹೇಗಿದ್ರುಸ್ನಾನಕ್ಕೆ ನೀರು ಬಿಸಿಯಾಗಿರುತ್ತೆ’ ಎಂದೆಣಿಸಿ ತನ್ನ ಮಗು ಪುಟ್ಟುವಿನ ಕೊಠಡಿಯೆಡೆ ನಡೆದವರು,.........
ಇದ್ದಕ್ಕಿದ್ದಂತೆಯೇ ಸೆರಗನ್ನು ಕಣ್ಣಿಗೊತ್ತಿಕೊಳ್ಳುತ್ತ, ಹಣೆಯನ್ನು ಮುಂಗೈನಿಂದ ಚಚ್ಚಿಕೊಳ್ಳುತ್ತಾ ಮರಳಿ ಬಚ್ಚಲ ಒಲೆಯಬಳಿಬಂದು ಆಗತಾನೆ ಹತ್ತಿಕೊಳ್ಳುತ್ತಿದ್ದ ಕಟ್ಟಿಗೆಗಳನ್ನು ಎಡಗೈನಿಂದ ಎಳೆದು ಬಿಸುಟುಸೀದ ಅಡುಗೆ ಕೋಣೆಗೆ ನುಗ್ಗಿದವರೆ ಉಸಿರು ಸುಯ್ಯದಂತೆ ಮೂಲೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ಕರುಳು ಹಿಂಡುವಂತೆ ಅಳುತ್ತಿದ್ದವರಿಗೆ ಒಡನೆಯೇ ತನ್ನ ಗಂಡ ಎಚ್ಚರಗೊಂಡ ಸದ್ಧಾಗಿಸೈರಿಸಿಕೊಂಡು ಎಲ್ಲಾ ಮರೆತವರಂತೆ ಕೆಲಸದಲ್ಲಿ ತೊಡಗಿಕೊಂಡರು.
ಬೆಳಗ್ಗಿನ ಕಾರ್ಯಗಳನ್ನೆಲ್ಲವನ್ನು ಮುಗಿಸಿಬಂದ ಪತಿದೇವನಿಗೆ ಕಾಫಿಯನ್ನು ನೀಡಿ ‘ ತಿಂಡಿ ಮಾಡಿಟ್ಟಿದೀನಿ ತಿನ್ಕೊಂಡ್ ಹೋಗಿ ಕೆಲಸಕ್ಕೆ, ಈ ದನ ರಾತ್ರಿಯಿಂದ ಒಂದೇ ಸಮನೇ ಕೂಗ್ತಾ ಇದೆ ಗಬ್ಬದ ದನಬೇರೆ... ಅರೆ ಹೊಟ್ಟೆ ಆಗಿ ಕಂದು ಕರು ಹಾಕಿದ್ರೆ ಕಷ್ಟ, ನಾನ್ ಮೊದ್ಲು ತೋಟಕ್ಕೆ ಹೋಗಿ ಹುಲ್ಲು ತರ್ತೀನಿ , ನೀವ್ ಹೋಗ್ತಾ ಬೀಗ ಹಾಕಿ ಕೀ ನ ಅಲ್ಲೇಶಾವಂತಿಗೆ ಗಿಡದ ಹತ್ತಿರ ಇಟ್ಟೋಗಿ, ನಾಯಿಗೆ ಅನ್ನಹಾಕಿ ಮರಿಬೇಡಿ’ ಎಂದು ಗಂಡನಿಗೆ ಆತ ನಿತ್ಯ ಮಾಡುವ ಕೆಲಸಗಳನ್ನೆ ಮತ್ತೊಮ್ಮೆ ಆತನಿಗೆ ಮನದಟ್ಟು ಮಾಡಿಸಿ, ಕತ್ತಿ ಮತ್ತೆರಡು ಹಗ್ಗದ ತುಂಡುಗಳನ್ನು ಹಿಡಿದು ತೋಟದ ಮುಖ ಮಾಡಿದರು.
ತುಂಬಾ ದಿನಗಳು ಕಳೆದಿದ್ದರೂ ಸಹ, ಇಂದಿನ ದಿನ ಮಾತ್ರಾ ಸಾವಿತ್ರಮ್ಮನವರಿಗೆ ಇನ್ನಿಲ್ಲದ ಯಾತನೆ, ಕಿತ್ತು ತಿನ್ನುವ ನೆನಪು ದುಗುಡಗಳಿಂದ ಕೂಡಿತ್ತು. ಮಾಡುವ ಕಾಯರ್ಯದಲಿ ಒಂದಿನಿತು ಮನಸ್ಸಿಳಿದಿಲ್ಲ,ಯಾಂತ್ರಿಕ ಚಲನೆಗೆ ಒಳಪಟ್ಟ ದೇಹ ಕೇವಲ ನೆನಪುಗಳೇ ನೈಜವೆಂದು ಬದುಕುತ್ತಿರುವ ಮನಸ್ಸು ಹತೋಟಿಗೆ ಸಿಗದಷ್ಟು ಹಠ ಮಾಡುತ್ತಿತ್ತು.
ತೋಟದಿಂದ ಮನೆಗೆ ಬಂದವರೇ, ಮನೆಯೊಳಗಿನ ನೀರವತೆ ಕಂಡಾಗ ನನ್ನ ಮಗ ಪುಟ್ಟು ಶಾಲೆಗೆ ಹೋಗಿದ್ದಾನೆ ಪಾಪ... ಇಲ್ಲಾಂದ್ರೆ ಈ ಮನೆ ಇಷ್ಟು ಅಚ್ಚುಕಟ್ಟಾಗಿ ಇರೋದಕ್ಕೆ ಸಾಧ್ಯ ಇರಲಿಲ್ಲಎಂದುಕೊಳ್ಳುತ್ತ ಸೀದ ನಡೆದು ನಡುಮನಯ ಮೂಲೆಯಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲಿಗೆ ಕೈ ಹಾಕಿ ಎಳೆದರು. ತುಂಬಾ ದಿನದಿಂದ ತೆರೆಯದೆ ತುಕ್ಕು ಬಿದ್ದಿದ್ದಬೀರು ಒಂದೆರಡು ಎಳೆತಕ್ಕೆ ಬಗ್ಗದೇಬಲವಾಗಿ ಎಳೆದೊಡನೆ ಕಿರ್ರೆಂದು ಕೂಗುತ್ತ ಹಂತ ಹಂತವಾಗಿ ತೆರೆದುಕೊಂಡಿತು. ಬೀರುವಿನೊಳಗೆ ಹತ್ತಾರು ಖಾಗದ ಪತ್ರ ಇನ್ನಿತರ ಸಾಮಗ್ರಿಳಿದ್ದರೂ ಸಹಿತ ಸಾವಿತ್ರಮ್ಮನವರ ಕಣ್ಣಿಗೆ ಬಿದ್ದದ್ದು ಕಳೆದ ವರ್ಷಪುಟ್ಟುವಿಗೆ ಹೊಲಿಸಿದ್ದ ಬಿಳಿ ಅಂಗಿ. ಕೇವಲ ಒಂದು ಬಾರಿಯಷ್ಟೇ ಧರಿಸಿದ್ದ .... ಅಂಗಿ ತುಂಬಾ ದೊಡ್ಡದು ಶಾಲೆಯಲ್ಲಿ ಎಲ್ಲರೂ ನಗುತ್ತಾರೆ ನಾನು ಇನ್ನೂ ತುಂಬಾ ದೊಡ್ಡ ಆದ್ಮೇಲೆ ಹಾಕ್ತೇನೆ ಎಂದು ಧರಿಸಿವಾಪಾಸು ಕೊಟ್ಟ ಅಂಗಿಯನ್ನು ವರ್ಷದ ಹಿಂದೆ ಮಡಿಸಿಟ್ಟ ಪುಟ್ಟುವಿನ ತಾಯಿ ಇಂದು ಮತ್ತೆ ನೋಡಿದ್ದರು ಒಲ್ಲದ ಮನಸ್ಸಿನಿಂದ. ಅಂಗಿಯನ್ನು ಎರಡು ಕೈಯಿಂದ ಎತ್ತಿ ಮುಖಕ್ಕೆ ಒತ್ತಿಕೊಂಡರು.. ಪುಟ್ಟುವಿನಬೆವರ ವಾಸನೆ ಇನ್ನೂ ಕೂಡ ಈ ಅಂಗಿಯಲ್ಲಿ ಆವರಿಸಿಕೊಂಡಿದೆ ಎಂದೆನಿಸಿ ಮತ್ತಷ್ಟು ಬಲವಾಗಿ ಅದನ್ನೆ ಘ್ರಾಣಿಸತೊಡಗಿದರು. ಇನ್ನೇನು ಮನಸು ಆತ್ಮಗಳೆರಡು ಆ ಗಂಧದಲ್ಲೆ ಮುಳುಗಿ ಮೈಮರೆಯಬೇಕುಎನ್ನುವಷ್ಟರಲ್ಲೆ ಚಕ್ಕನೆ ಅಂಗಿಯನ್ನು ಮುಖದಿಂದ ದೂರ ಹಿಡಿದು ಎಲ್ಲಿ ಹಣೆಯ ಕುಂಕುಮ ಬೊಟ್ಟು ಅಂಗಿಗೆ ಅಂಟಿ ಕಲೆಯಾಗಿದೆಯೋ ಎಂದು ಹುಡುಕಿದರು... ಕಲೆಯಾದರೆ ಮುಗಿದೇ ಹೋಯ್ತು ಪುಟ್ಟುವನ್ನು ಸಮಾಧಾನ ಮಾಡುವ ಶಕ್ತಿ ಬೇಕಲ್ಲ ‘ ದೇವರ ದಯೆಯಿಂದ ಏನು ಆಗಿಲ್ಲ’ ಎಂದುಕೊಂಡು ಅಂಗಿಯನ್ನು ಹಾಗೆಯೇ ಮೊದಲಿನಂತೆ ಮಡಚಿಡುವಷ್ಟರಲ್ಲಿ ಹೊರಗಿನಿಂದ ಯಾರೋ ಕರೆದಶಬ್ಧವಾಯ್ತು.
ಮುಂಬಾಗಿಲು ತೆರೆದವರಿಗೆ ಎದುರು ಕಂಡದ್ದು ತನ್ನ ಮಗ ಪುಟ್ಟುವಿನ ಶಾಲೆಯ ಮಾಸ್ತರರು, ಅವರು ಪುಟ್ಟುವಿನ ಮಾಸ್ತರರು ಕೂಡ.
ಜನಗಣತಿಗೆಂದು ಬಂದಿದ್ದರು, ಮೂಲತಃ ತುಂಬಾ ದೂರದೂರಿನವರಾಗಿದ್ದ ಅವರಿಗೆ ಊರಿನ ರಸ್ತೆ ಮನೆಗಳ ವಿಳಾಸ ತೋರಿಸಲೆಂದೆ ಕೆಲ ಮಕ್ಕಳು , ಶಾಲೆಯಲ್ಲಿ ಕೂತು ಜಿಡ್ಡು ಹಿಡಿಸಿಕೊಳ್ಳುವ ಬದಲುಬಿಸಿಲಲ್ಲಿ ಊರು ಸುತ್ತುವುದೆ ಉತ್ತಮವೆಂದೆಣಿಸಿ ಮಾಸ್ತರ ಬಾಲ ಹಿಡಿದಿದ್ದರು.
ಮಾಸ್ತರರನ್ನು ಕಂಡ ಸಾವಿತ್ರಮ್ಮ ನವರಿಗೆ ಸಹಿಸಲಾಗಲಿಲ್ಲ. ಅಳುತ್ತಾ ಅಳುತ್ತಾ “ನೋಡೋ ಪುಟ್ಟು ಈವತ್ತಾದ್ರು ಬಾ ಹೊರಗೆ, ನಿಮ್ ಮಾಸ್ತರು ಹೊಡ್ಯಲ್ಲ.... ಬಾ ಮಗನೆ ಹೋರಗೆ ಅಯ್ಯೋ. ದೆವ್ರೇ.....”ಎಂದು ನೆಲದಮೇಲೆ ಬಿದ್ದರು.ಹೊರಳಿ ರೋಧಿಸುತ್ತಿದ್ದ ತಾಯಿಯನ್ನು ಕಂಡ ಮಾಸ್ತರರು ಅಸಾಹಯಕರಾಗಿ ನಿಂತರು...
ನದಿಗೆ ಈಜಲೆಂದು ತೆರಳಿದ್ದ ಪುಟ್ಟು ಸಾವನ್ನಪ್ಪಿ ಇಂದಿಗೆ ಸರಿಸುಮಾರು ಒಂದು ವರ್ಷವೇ ಕಳೆಯಿತು.
-ಸಚಿನ್ ಶೃಂಗೇರಿ.
Comments
Post a Comment