ಸುಪ್ತ ಮನಸ್ಸು _ಸತ್ತ ಕನಸು
ಎಂದಿನಂತೆ ಕೆಲಸ ಮುಗಿಸಿ ರಾತ್ರಿ ಎಂಟರ ಸಮಯಕ್ಕೆ , ಕೋಣನಕುಂಟೆಯ ತನ್ನ ಮನೆ ಕಡೆಗೆ ಆಫೀಸ್ ಕ್ಯಾಬ್ ಏರಿ ವ್ರಿದ್ಧಿ ಹೊರಟ್ಟಿದ್ದಂತೂ ನಿಜ . ಅಂದು ಕೂಡ ಎಂದಿನಂತಹ ದಿನವೇ ಆಗಿತ್ತು ಅವಳ ಪಾಲಿಗೆ. ದಿನವೆಲ್ಲ ಕಂಪ್ಯೂಟರಿನ ಎದುರು ಕೂತುಮಂಕಾಗಿ , ಮುಖವೆಲ್ಲ ಎಣ್ಣೆ ಸುರಿಸಿಕೊಂಡು, ವಿಷಯ ಏನು ಇಲ್ಲದಿದ್ದರೂ ಸಹಿತ ಜಗತ್ತಿನ ಸಂಕಷ್ಟವೆಲ್ಲ ನನಗೆ ಇದೆ ಎಂಬಂತೆ ಮೋರೆ ಮಾಡಿಕೊಂಡು ಕಿವಿಗಳಿಗೆ ಇಯರ್ ಪ್ಲಗ್ ಸಿಕ್ಕಿಸಿಕೊಂಡ ನಾಲ್ಕಾರು ಯುವಕ ಯುವತಿಯರು ಕೂಡ ಕ್ಯಾಬಿನೊಳಗೆತೂರಿಕೊಂಡರು. ಇವರೆಲ್ಲರನ್ನು ಗೋಜಿಗೆ ತೆಗೆದುಕೊಳ್ಳದ ಡ್ರೈವರ್ ತಿಪ್ಪೇಶಿ ತನ್ನ ಪಾಡಿಗೆ ತಾನೆಂಬಂತೆ ಕಾರಿ ಅಯ್ಕ್ಸಿಲರೇಟರ್ ಅನ್ನು ಕೊರಮಂಗಲದೆಡೆಗೆ ತುಳಿದ.
ಸುಸ್ತಿನಿಂದ ನಿದ್ದೆಗೆ ಜಾರಿದ್ದ ವ್ರಿದ್ಧಿಗೆ ಪಕ್ಕನೆ ಎಚ್ಚರವಾದಾಗ ಅಕ್ಕ ಪಕ್ಕ ಕುಳಿತವರು ಯಾರು ಇರಲಿಲ್ಲ . ಕ್ಯಾಬ್ ಎಡಕ್ಕೆ ಬಲಕ್ಕೆ ವಾಲುತ್ತಾ ತೇಲುತ್ತ ನಿದಾನವಾಗಿ ಸಾಗುತ್ತಿತ್ತು . ಮುಂದಿನ ಎಡಭಾಗದ ಸೀಟಿನಲ್ಲಿ ಕುಳಿತಿದ್ದ ಸೆಕ್ಯುರಿಟಿ ಕುತ್ತಿಗೆಯನ್ನು ಕೆಳಗೆನೇತುಬಿಟ್ಟುಕೊಂಡು ತೂಕಡಿಸುತ್ತ , ಕ್ಯಾಬ್ನ ಓಲಾಟಕ್ಕೆ ತಕ್ಕಂತೆ ಕುತ್ತಿಗೆ ತಾಳ ಹಾಕುತ್ತ ಕುಳಿತಿದ್ದ . ಹಿಂದೆ ತಿರುಗಿ ನೋಡಿದ ಡ್ರೈವರ್ ತಿಪ್ಪೇಶಿ " ಎಚ್ರ ಅಯ್ತ್ರಾ ಮೇಡಂ, ಇಲ್ಲಿಂದ ಮುಂದೆ ದಾರಿ ಹೇಳಿ " ಎಂದ .
ಅಸ್ಪಷ್ಟ ಎಚ್ಚರವಾಗಿದ್ದ ವ್ರಿದ್ಧಿಗೆ ಡ್ರೈವರ್ ನ ಮಾತುಗಳು ಕಿವಿಯ ಸುತ್ತ ಜೇನುಹುಳುಗಳು ಗುಯ್ಯ್ಗುಟ್ಟಿದಂತೇ ಕೇಳಿದವು . ಈಗತಾನೇ ನಿದ್ದೆ ಮುಗಿಸಿದ್ದ ಮಂಜು ಮಂಜಾಗಿದ್ದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಸರಿಯಾಗಿ ರಸ್ತೆಯನ್ನೊಮ್ಮೆ ಗಮನಿಸಿ " ಸೀದಾಹೋಗಿ , ಡೆಡ್ ಎಂಡ್ ಲೆಫ್ಟ್ ತಗೋಳಿ " ಎಂದು ನೀರಿನ ಬಾಟಲ್ಗಾಗಿ ಬ್ಯಾಗಿನೊಳಗೆ ಕೈ ಹಾಕಿ ಹುಡುಕತೊಡಗಿದಳು .
ಕಾರು ನಿರ್ಜನ ರಸ್ತೆಯಲ್ಲಿ ಸಾಗುತ್ತಿತ್ತು , ಬೀದಿದೀಪಗಳು ಕೂಡ ಆರಿ ನಿಂತಿದ್ದವು . ಕಾರಿನ ಹೆಡ್ ಲೈಟ್ ಬೀಳುತ್ತಿದ್ದ ಜಾಗವೊಂದು ಬಿಟ್ಟರೆ ಮತ್ತೆಲ್ಲವೂ ಕೇವಲ ಕಪ್ಪಾಗಿ ಕಾಣುತ್ತಿತ್ತು .
"ಹೋವ್ " ಎಂದು ಕೂಗಿಕೊಂಡು ಒಂದೇ ಸಮನೆ ಬ್ರೇಕ್ ಹೊಡೆದ ರಭಸಕ್ಕೆ ನೀರು ಕುಡಿಯುತ್ತಿದ್ದ ವ್ರಿದ್ಧಿ ಮುಗ್ಗರಿಸಿ ಮುಂದಿನ ಸೀಟಿಗೆ ತಲೆ ಹೊಡೆಸಿಕೊಂಡಳು . ಬಾಯಲ್ಲಿದ್ದ ನೀರೆಲ್ಲ ಕಾಲುತುಂಬ ಕಾರಿನ ತುಂಬೆಲ್ಲ ಚೆಲ್ಲಿ ಮೂಗಿನಲ್ಲೆಲ್ಲ ಹೊರಬಂದು....ಜೋರಾಗಿ ಕೆಮ್ಮುತ್ತ ಮೇಲೇಳುತ್ತ ಸವಾರಿಸಿಕೊಂಡು ಏನಾಯ್ತೆಂದು ಕಾರಿನ ಮುಂಬಾಗದೆಡೆಗೆ ನೋಡತೊಡಗಿದಳು . ನೀರಿನ ಬಾಟಲಿ ಕೈ ಜಾರಿ ಸೀಟಿನಡಿ ನುಗ್ಗಿ ಹೋಯಿತು . ಎದುರು ಭಾಗದಲ್ಲಿ ತೂಕಡಿಸುತ್ತ ಕುಳಿತಿದ್ದ ಸೆಕ್ಯೂರಿಟಿಯಾ ಮುಖಡ್ಯಾಶ್ಬೋರ್ಡ್ ಗೆ ಗುದ್ದಿ ಮೂಗಿನಿಂದ ರಕ್ತ ಸುರಿಯುತ್ತಿತ್ತು . ಎಡಗೈಯನ್ನು ಮೂಗಿಗೆ ಒತ್ತಿಕೊಂಡು " ಏನಾಯ್ತಲೆ ..?" ಎಂದು ಸ್ಟಿಯರಿಂಗ್ ಹಿಡಿದು ದಿಗ್ಬ್ರಾಂತನಾಗಿ ಕುಳಿತಿದ್ದ ತಿಪ್ಪೇಶಿಯನ್ನು ಕೇಳಿದ . "ಮಗು "...!! "ಚಿಕ್ಕ್ ಮಗು ....!!, ಕಾರಿಗೆ ಅಡ್ಡಬಂತು "ಎಂದು ಹೆದರಿಕೊಂಡು ತೊದಲುತ್ತ ನುಡಿದ .
" ಮಗುನ ...? ಇಲ್ಲಿ ಸುತ್ತ ಮುತ್ತ ಯಾವ್ ಮನೆ ಕೂಡ ಇಲ್ಲ . ಅದು ಕೂಡ ಈ ಹೊತ್ತಿನಲ್ಲಿ . ನಿಮಗೇನೋ ಭ್ರಮೆ ಅನಿಸುತ್ತೆ, ಗಾಡಿ ನಿಲ್ಲಿಸಬೇಡಿ ,ಹೊರಡಿ " ಎಂದು ಆತಂಕದಲ್ಲಿ ಸೀಟಿನ ತುದಿ ಕುಳಿತಿದ್ದ ವ್ರಿದ್ಧಿ, ಕೆಮ್ಮಿ ಕೆಮ್ಮಿ ಕೆಂಪಾಗಿದ್ದ ಕಣ್ಣುಗಳನ್ನುಒರೆಸಿಕೊಳ್ಳುತ್ತ ಹೇಳಿದಳು .
" ಲೇಯ್ , ನಿನ್ ಮಕಾ ಸುಡ .... ಈ ಹೊತ್ನಾಗೆ ಮಗ ಎಲ್ಲಿಂದ ಬತ್ತೈತಲಾ ... ಕುಡ್ ಗಿಡ್ದಿಯೆನ್ಲಾ , ಮುಚ್ಕಂಡ್ ನಡೀಲಾ, ಈ ಜಾಗ ಬ್ಯಾರೆ ಸರೀಕಿಲ್ಲ , ಡೋರ್ ತೆಗ್ದ್ ಒಡನೆ ತಲೆ ಗಿಲ್ ಓಡ್ದು ಇರಾದ್ನೆಲ್ಲ ಕಿತ್ಕೊ ಹೋಗ್ಯಾರು ...ನಡಿ ನಡೀ " ಎಂದು ತಿಪ್ಪೇಶಿ ಗೆಬಯ್ಯುತ್ತ , ಒಡೆದ ಮೂಗನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡನು ಮನೆಗೆ ಹೋಗುವ ಆತುರದಲ್ಲಿದ್ದ ಸೆಕ್ಯೂರಿಟಿ .
ತಿಪ್ಪೇಶಿ ಆಕ್ಸಿಲರೇಟರ್ ತುಳಿದ .... ಆಕ್ಷಣಕ್ಕೆ ಆತ ಹೆದರಿದ್ದರು ಸಹ , ಇಂತಹ ಘಟನೆಗಳನ್ನು ಹಲವಾರು ಬಾರಿ ಕಂಡಿದ್ದ ಆತ ಎಲ್ಲದರಂತೆ ಮರೆತುಬಿಟ್ಟ .ವ್ರಿದ್ಧಿ ತನ್ನ ಮನೆ ಸೇರಿದಳು .
ಊಟ ಮಾಡುತ್ತಲೇ ಫೇಸ್ಬುಕ್ ನೋಡುತ್ತಾ ಕುಳಿತಿದ್ದ ವ್ರಿದ್ಧಿಗೆ ಆಕರ್ಷಣೀಯ ಎನಿಸುವ ವಿಡಿಯೋ ಒಂದು ಕಣ್ಣಿಗೆ ಬೀಳುತ್ತಲೇ ತೆರೆದು ನೋಡಿದಳು , ಯಾವುದೋ ಇಂಗ್ಲಿಷ್ ಚಿತ್ರದ ತುಣುಕು ಅದು.... 'ಗೊಂಬೆಯೊಂದು ಹತ್ತಿರ ನಡೆದು ಬರುತ್ತಿದೆ ....ಬರುತ್ತಿದೆ .... ಬರುತ್ತಿದೆ ... ಬಂದು ಮಲಗಿದ್ದ ನಾಯಕಿಯ ಎದೆಯ ಮೇಲೆ ಕುಳಿತಿದೆ ... ಚಿತ್ರದ ನಾಯಕಿ ಹೌಹಾರಿ ಏಳುತ್ತಾಳೆ ... ಆಕೆಯ ಮೈ ಎಲ್ಲ ಬೆವೆತಿದೆ' ... ಥೂ ಬಕ್ವಾಸ್ ವಿಡಿಯೋ ಇದು ಎಂದುಕೊಳ್ಳುತ್ತ ಸಂಪೂರ್ಣ ಫೇಸ್ಬುಕ್ ನಿಂದ ಹೊರಬಂದು... ಊಟ ಮುಗಿಸಿ , ಮೊಬೈಲ್ ಫೋನ್ ಅನ್ನು ಚಾರ್ಜ್ ಗೆ ಸಿಲುಕಿಸಿ ಸೀದಾ ತನ್ನ ಕೊಣೆಗೆ ತಲುಪಿ ಮಲಗುತ್ತಾಳೆ ....ಹಾಸಿಗೆ ಸಿದ್ದಪಡಿಸುತ್ತಿದ್ದಾಗ ಇವತ್ತಿನ ದಿನ ನಡೆದ ಘಟನೆಗಳೆಲ್ಲ ಮತ್ತೆ ನೆನಪಾಗತೊಡಗಿದರು ಸಹ ಎಲ್ಲವನ್ನು ನಿರ್ಲಕ್ಷಿಸಿ ನಿದ್ದೆಯಸುಳಿಯೊಳಗೆ ಜಾರಿಕೊಂಡಳು.
* * *
ಸಮಯ ಸರಿಸುಮಾರು ರಾತ್ರಿಯ ಎಂಟು ಮೂವತ್ತು ಆಗಿರಬಹುದು ...." ಸರ್ ... ಇಲ್ಲಿ ಡೆಡ್ ಬಾಡೀಸ್ ಎಲ್ಲಿಡ್ತಾರೆ " ಎಂದು ಕೇಳಿದ ವ್ರಿದ್ಧಿಗೇ ..." ನೋಡಮ್ಮ ಇಲ್ಲೇ ಸೀದಾ ಕೆಳ್ಗೆ ನಡ್ಕೊಂಡು ಹೋಗು, ಅಲ್ಲೊಂದು ಗೇಟ್ ಸಿಗುತ್ತೆ ,ಅದಾದ್ಮೇಲೆ ಲೆಫ್ಟ್ ತಗೊಂಡ್ರೆ ಅಲ್ಲೇ ಬೋರ್ಡ್ ಕಾಣುತ್ತೆ, ಅಲ್ಲೇ ಇರೋದು , ಅಲ್ಲೇನಾದ್ರೂ ಗೇಟ್ ಕ್ಲೋಸ್ ಆಗಿದ್ರೆ ಮತ್ತೆ ಇಲ್ಲಿಗೆ ವಾಪಾಸ್ ಬಂದು ...ಈ ಮೇನ್ ರೋಡ್ ಇಂದ ಹೋಗ್ಬೇಕು , ಅಲ್ಲಿ ಒಂದು ಚರ್ಚ್ ಕಾಣ್ತಾ ಇದ್ಯಲ್ಲ ಅದ್ರ ಆಕಡೆಗೆ ".... ಎಂದ ಪಾರ್ಕಿಂಗ್ ಕಾಯುತ್ತಿದ್ದ ಸೆಕ್ಯೂರಿಟಿ.
"ಸರಿ ... ತುಂಬಾ ಥ್ಯಾಂಕ್ಸ್ " ಎಂದು ಉತ್ತರಿಸಿ ಆತ ಹೇಳಿದ ದಾರಿ ಕಡೆಗೆ ನಡೆಯಲು ಮುಂದಾವಿಸುತ್ತಲೇ.... "ಯಾಕೆ ಮೇಡಂ .... ಯಾರಿಗೆ ಏನಾಯ್ತು " ಎಂದು ಕೇಳಿದ ಆ ಸೆಕ್ಯೂರಿಟಿ ಗೆ... "ನಮ್ಮ ರಿಲೇಟಿವ್ ಒಬ್ಬರ ಮಗು ತೀರ್ಕೊಂಡಿದೆ... ಆಕ್ಸಿಡೆಂಟ್ ನಲ್ಲಿ " ಎಂದು ಉತ್ತರಿಸುತ್ತಲೇ ... "ಅಯ್ಯೋ ದೇವ್ರೇ "ಎಂದು ಗೊಣಗಿಕೊಂಡ ಸೆಕ್ಯೂರಿಟಿಯಾ ಧ್ವನಿ ವ್ರಿದ್ಧಿಯ ಕಿವಿಯಲ್ಲಿ ತುಂಬಿಕೊಂಡಿತು .
ಆತ ಹೇಳಿದ ದಾರಿಯಂತೆ ನಡೆದು ಹೋಗುತ್ತಲೇ ದಾರಿಯ ಎಡಬಾಗದಲ್ಲಿ ತುಕ್ಕು ಹಿಡಿದ ಕಬ್ಬಿಣದ ಗೇಟ್ ಮೇಲೆ 'ಶವಗಾರ' ಎಂದು ಬರೆದ ಬೋರ್ಡ್ ಒಂದು , ಒಂದು ಬದಿಯ ಮೊಳೆ ಕಳಚಿಕೊಂಡು ಕೇವಲ ಒಂದೇ ಮೊಳೆಯ ಆಧಾರದಮೇಲೆ ತ್ರಿಕೋನಾಕಾರವಾಗಿ ನೇತು ಬಿದ್ದಿತ್ತು.
ಅಲ್ಪಸ್ವಲ್ಪ ತೆರೆದು ನಿಂತಿದ್ದ ಗೇಟ್ ಅನ್ನು ತಳ್ಳಿದೊಡನೆ ಸುತ್ತಮುತ್ತಲಿನ ಕತ್ತಲು ಮತ್ತು ಮೌನವನ್ನು ಸೀಳುವಂತೆ 'ಕ್ರೀ.........0ಕ್ ' ಶಬ್ದ ಮಾಡುತ್ತ ತೆರೆದುಕೊಂಡಿತು. ಚಿಕ್ಕ್ಕ ಮನೆಯಂತಿದ್ದ ಶವಾಗಾರದ ಮುಂಭಾಗದಲ್ಲಿ ಟ್ಯೂಬಲೈಟ್ ಒಂದುಉರಿಯುತ್ತಿತ್ತು . ವ್ರಿದ್ಧಿ ಮೆಟ್ಟಿಲು ಹತ್ತಿ ಶವಾಗಾರದ ಬಾಗಿಲ ಬಳಿ ನಿಲ್ಲುತ್ತಾಳೆ. ಟ್ಯೂಬ್ಲೈಟ್ ಸುತ್ತ ಸುತ್ತುತ್ತಿದ್ದ ಹುಳು ಹುಪ್ಪಟೆಗಳ ರೆಕ್ಕೆಗಳು ಉದುರಿ ಆಕೆಯ ಮೈಮೇಲೆ ಬೀಳುತ್ತಿವೆ ,ಕೆಲವೊಂದಷ್ಟು ಕೂದಲಿಗೆ ಸಿಕ್ಕಿಕೊಂಡು ಕಚಗುಳಿಕೊಡುತ್ತಿದ್ದರು ಅದನ್ನು ಗಮನಿಸುವ ಸ್ಥಿತಿಯಲ್ಲಿ ಆಕೆ ಇಲ್ಲ. ಒಳಗಡೆ ವ್ಯಕ್ತಿಯೊಬ್ಬ ಶವಾಗಾರದ ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದಾನೆ . ಪ್ಲಾಸ್ಟಿಕ್ ಕವರ್ ನ ಒಳಗಿರುವ ಊಟವನ್ನು ಎಡಗೈಯಲ್ಲಿ ಹಿಡಿದು ತಿನ್ನುತ್ತಾ , ಯಾವುದೊ ತಮಿಳುನಗೆಭಾಷಣವನ್ನು ನೋಡುತ್ತಾ ಟಿವಿ ಯ ಎದುರು ಕುಳಿತಿದ್ದಾನೆ .ಆತನ ಪಕ್ಕದಲ್ಲೇ ತುಕ್ಕು ಹಿಡಿದ ಹಳೆಯ ಕಬ್ಬಿಣದ ಕುರ್ಚಿಗಳು , ಮುರಿದ ಕಿಟಕಿ ಮತ್ತು ಕಪಾಟಿನ ತುಂಡುಗಳು , ಶವವನ್ನು ಸಾಗಿಸುವ ಸ್ಟೆಚ್ಚರ್ ಗಳನ್ನು ಜೋಡಿಸಿಡಲಾಗಿದೆ.ಕೊನೆಯಲ್ಲಿ ಹಳದಿ ಬಣ್ಣದ ಗಾಜಿನ ಬಲ್ಬ್ ಒಂದು ಮಂಕಾಗಿ ಉರಿಯುತ್ತಿದೆ.ಆತ ಒಳಗಿರುವುದನ್ನು ಗಾಜಿನ ಬಾಗಿಲಿನಿಂದ ಗಮನಿಸಿದ ವ್ರಿದ್ಧಿ ನಿಧಾನವಾಗಿ ಬಾಗಿಲನ್ನು
ಎರಡು ಬಾರಿ ಬಡಿದಳು. ಶಬ್ದ ಕೇಳಿ ತಿರುಗಿ ನೋಡಿದ ಆತ "ಇರಿ ಇರಿ ....ಬರ್ತೀನಿ " ಎನ್ನುವಂತೆ ಮುಸುರೆ ಕೈನಲ್ಲೇ ಸನ್ನೆ ಮಾಡಿ ತನ್ನ ಪಾಡಿಗೆ ತಾನು ಊಟ ಮುಂದುವರೆಸಿದ.
"ಎನ್ನ ..?ಸೊಲ್ಲ ..... ಏರ್ ನೀ...ಇಂತ ನೆರತ್ತಿಲ್ ?" ಎಂದು , ಹೊರಬಂದ ಆ ವ್ಯಕ್ತಿ ತಮಿಳಿನಲ್ಲಿ ಪ್ರಶ್ನಿಸಿದ .
"ಸಾರ್ ಕನ್ನಡ ಅಥವಾ ಹಿಂದಿ ...??" ಎಂದಳು ವ್ರಿದ್ಧಿ.
" ಹ ....ಕನ್ನಡ ಬರತ್ತೆ " ಎಂದು ಗೊಗ್ಗರು ಧ್ವನಿಯಲ್ಲಿ ಉತ್ತರಿಸಿದ .
" ಒಂದು ಮಗು ಆಕ್ಸಿಡೆಂಟ್ ನಲ್ಲಿ ತೀರ್ಕೊಂಡಿದೆ , ಬಾಡಿ ಇಲ್ಲಿ ಇಟ್ಟಿದಾರೆ ....ನೋಡ್ಬೇಕಿತ್ತು ಇವಾಗ್ಲೆ" ಎಂದಳು .
" ಆಗಲ್ಲಮ್ಮಾ ಈವಾಗ .... ಕ್ಲೋಸ್ ಆಗಿದೆ ಒಳ್ಗೆ ಬಿಡೋ ಹಾಗಿಲ್ಲ , ಬೆಳಿಗ್ಗೆ ಬಾ ಒಂಬತ್ತು ಗಂಟೆಗೆ " ಎಂದ.
"ಇಲ್ಲ ಸಾರ್ ತುಂಬಾ ದೂರದಿಂದ ಬಂದಿದೀನಿ , ಬರ್ತಾ ಲೇಟ್ ಆಯ್ತು , ದಯವಿಟ್ಟು ಇದೊಂದ್ ಸಹಾಯ ಮಾಡಿ , ಬೆಳಿಗ್ಗೆ ಬರೋಕ್ ಆಗಲ್ಲ ಸಾರ್" ಎಂದು ಆತನನ್ನು ಕೇಳಿಕೊಂಡಳು .
"ಸಾಧ್ಯನೇ ಇಲ್ಲಮ್ಮ , ಇವಾಗ ಬಾಡಿ ಹೊರಗೆ ತೆಗದು ಏನಾದ್ರು ಆದ್ರೆ ಅಲ್ಲಿಗೆ ಮುಗೀತು ನನ್ ಕತೆ , ನಾಳೆ ಪೋಸ್ಟ್ ಮಾರ್ಟಮ್ ಇದೆ ... ಆಗಲ್ಲಮ್ಮ , ಹೋಗು ನೀನು " ಎನ್ನುತ್ತಲೇ ವ್ರಿದ್ಧಿ ತನ್ನ ಪರ್ಸ್ ನಿಂದ ಐನೂರರ ನೋಟನ್ನುಹೊರತೆಗೆದು ಆತನಿಗೆ ತೆಗುದುಕೊಳ್ಳುವಂತೆ ಹೇಳಿದಳು.
"ಅಯ್ಯೋ ಇದೆಲ್ಲ ಬೇಡಮ್ಮ .... ಅಯ್ಯೋ ಬಾ ಒಳಗೆ , ಬೇಗ ನೋಡ್ಬೇಕು .... ಅಳ್ತಾ ಕರೀತಾ ಕೂತ್ಕೋಬೇಡ ಮತ್ತೆ . ಏನೋ ಇಷ್ಟು ಕೇಳ್ಕೊತಿದ್ಯಾ ಅಂತ ಬಿಡ್ತಿದಿನಿ ಅಷ್ಟೇ . ಆ ದುಡ್ಡು ಬೇಡ ನಂಗೆ " ಎಂದು ವ್ರಿದ್ಧಿಯನ್ನು ಒಳಗೆಕರೆದುಕೊಂಡು ಹೋದ.
ಒಳಗೆ ಕಾಲಿಡುತ್ತಲೇ ಮಾಂಸ ಸುಟ್ಟಂತಹ ಕಮಟು ವಾಸನೆ ಮೂಗಿನ ಹೊಳ್ಳೆಗಳಲ್ಲಿ ನುಗ್ಗಿತು.ವ್ರಿದ್ಧಿ ಕರವಸ್ತ್ರ ತೆಗೆದು ಮೂಗು ಬಾಯಿ ಮುಚ್ಚಿಕೊಂಡಳು ,ಹೊಟ್ಟೆ ಒಳಗಿನಿಂದ ಸುತ್ತಿ ಬರತೊಡಗಿತು . ಆ ವ್ಯಕ್ತಿ ಒಳಗಡೆ ಬಾಗಿಲೊಂದರ ಚಿಲಕತೆಗೆದು ಲೈಟ್ ಹೊತ್ತಿಸಿದ. ಆತನನ್ನು ಹಿಂಬಾಲಿಸಿ ಅಂಜಿಕೆ ಮತ್ತು ದುಗುಡದಿಂದ ಒಳಗೆ ನಡೆದಳು.
ಆ ಕೊಠಡಿಯ ಒಳಗಡೆ ರೆಫ್ರಿಜರೇಟರ್ನಂತಹ ಬೃಹತ್ ಗಾತ್ರದ ಕಪಾಟುಗಳಿವೆ. ಎಲ್ಲ ಕಪಾಟುಗಳ ಮೇಲು ಸಹ ಕೆಂಪು ಬಣ್ಣದ ವಿದ್ಯುತ್ ದೀಪವೊಂದು ಉರಿಯುತ್ತಿದೆ . ಗುಂಯ್ಗುಡುವ ಮೋಟಾರ್ ಶಬ್ಧ. ಅತಿಯಾದ ಸೆಕೆ. ನರ ನರವನ್ನುನಲುಗಿಸುವ ಕಮಟು ವಾಸನೆ ಮತ್ತು ಮೌನವೇ ಎದ್ದು ವೇಷಧರಿಸಿ ಕೇಕೆ ಹಾಕಿ ಕುಣಿಯುತ್ತಿದೆ ಎನ್ನುವಂತಹ ಮೌನ ತುಂಬಿಕೊಂಡಿದೆ. "ಏನಮ್ಮ ಆ ಮಗು ಹೆಸರು ..?" ಎಂದು ಮೌನದ ನಡುವೆ ಪ್ರಶ್ನೆಯೊಂದನ್ನು ತೂರಿಸಿದ ಆ ವ್ಯಕ್ತಿ .
ವ್ರಿದ್ಧಿಗೇ ಮಂಕು ಬಡಿದಂತಾಯ್ತು ,ಆತನನ್ನೇ ನೋಡುತ್ತಾ ನಿಂತಳು , ಸಿಡಿದು ಬಡಿದವಳಂತೆ.
ಮಾತುಗಳು ನೆನಪಾಗುತ್ತಿದ್ದರು ಬಾಯಿ ತೆರೆದು ಹೇಳಲು ಸಾಧ್ಯವಾಗುತ್ತಿಲ್ಲ . ಶಕ್ತಿಯನ್ನೆಲ್ಲ ಉಗ್ಗೂಡಿಸಿ ಸಹ ಬಾಯಿ ತೆರೆಯಲು ಆಗುತ್ತಿಲ್ಲ . ಕೈಕಾಲುಗಳಲ್ಲಿ ನಡುಕ ಶುರುವಾಗುತ್ತಿದೆ ..!!,
"ಚಿಕ್ಕ್ ಮಗುದು ಬಾಡಿ ಒಂದೇ ಇರೋದು ಇಲ್ಲಿ , ತೋರಿಸ್ತಿನಿ... ಅದೇನ ನೋಡು " ಎಂದ ಆ ವ್ಯಕ್ತಿ ವಿದ್ಯುತ್ ಕಪಾಟಿನ ಬಾಗಿಲನ್ನು ತೆಗೆದ . ನಾಲ್ಕು ಮೃತದೇಹಗಳನ್ನು ಒಂದರ ಮೇಲೆ ಒಂದರಂತೆ ಅಟ್ಟಣೆಗಳ ಮೇಲೆ ಇಡಲಾಗಿತ್ತು .ಅದರಲ್ಲಿ ಒಂದು ಮೃತದೇಹದ ಸ್ಟ್ರೆಚ್ಚರ್ ಅನ್ನು ಹೊರಗೆಳೆದ. ಹೆಣ್ಣುಮಗುವೊಂದರ ದೇಹವೆನ್ನಲು ಆ ಶವ ಧರಿಸಿದ್ದ ಕೆಂಪು ಬಣ್ಣದ ಫ್ರಾಕ್ ಮಾತ್ರವೇ ಸಾಕ್ಷಿಯಾಗಿತ್ತು. ಏಕೆಂದರೆ ಆ ದೇಹಕ್ಕೆ ತಲೆ ಇರಲಿಲ್ಲ ,ಅಂದರೆ ತಲೆ ಚಕ್ರದ ಕೆಳಗೆ ಸಿಲುಕಿಅಪ್ಪಚ್ಚಿಯಾಗಿತ್ತು.
"ಏನಮ್ಮ ಎಲ್ಲೇ ನಿಂತಿದ್ಯಲ್ಲ ... ಇಲ್ಲಿ ಹತ್ರ ಬಂದು ನೋಡು " ಎಂದ ಆ ವ್ಯಕ್ತಿ .
ವ್ರಿದ್ಧಿ ಹೊರಳಾಡುತ್ತಿದ್ದಾಳೆ .ಬಾಯಿ ತೆರೆಯಲು ಆಗುತ್ತಲೇ ಇಲ್ಲ , ಮುಂದೆ ನಡೆಯುತ್ತಿದೇನೆ ಎಂದು ಎನಿಸಿದರೂ ಸಹ ಕಾಲುಗಳು ಅಲ್ಲೇ ನಿಂತಿವೆ . "ಯಾಕಮ್ಮ ...ಏನು ತಮಾಷೆ ಮಾಡ್ತಿದ್ಯಾ " ಎಂದು ಸಿಟ್ಟಿನಿಂದ ಆ ವ್ಯಕ್ತಿ ಮುನ್ನುಗ್ಗಿ ಬಂದು, ಈಕೆಯನ್ನು ಶವದ ಎದುರು ಕರೆದೊಯ್ಯಲೆಂದು ಕೈ ಹಿಡಿದು ಎಳೆಯುತ್ತಾನೆ ....!!!
ವ್ರಿದ್ಧಿಯಾ ಮೈ ಸಂಪೂರ್ಣ ಬೆವರಿ ಒದ್ದೆಯಾಗಿದೆ . ಏದುಸಿರು ಬಿಡುತ್ತಿದ್ದಾಳೆ . ಎದುರಿದ್ದ ಗಡಿಯಾರದಲ್ಲಿ ಸಮಯ ರಾತ್ರಿಯ 1:30 ಆಗಿದೆ . ಫ್ಯಾನ್ ತಿರುಗುತ್ತಲೇ ಇದೆ. ಎದೆ ಬಡಿತ ಕಿವಿಗೆ ಕೇಳುವಷ್ಟು ಜೋರಾಗಿದೆ. ಆಕೆ ಮತ್ತೆ ವಾಸ್ತವಜಗತ್ತಿಗೆ ಬಂದು ಸುಧಾರಿಸಿಕೊಂಡು , ತುಂಬಾ ಸೆಕೆಯೆನಿಸಿ ಹೊದ್ದುಕೊಂಡಿದ್ದ ಹೊದಿಕೆಯನ್ನು ಬದಿಗೆಸೆದು ಮತ್ತೆ ಮಲಗುವ ಪ್ರಯತ್ನ ಮಾಡಿದರು ಸಹ ನಿನ್ನೆ ಕ್ಯಾಬ್ನಲ್ಲಿ ಬರುವಾಗ ನಡೆದ ಘಟನೆ ಮತ್ತು ಈಗಾತಾನೇ ಬಿದ್ದ ಆ ಕೆಟ್ಟ ಕನಸುಮತ್ತೆ ತಲೆಯೊಳಗೆ ಕುಳಿತು ಕೊರೆಯುತ್ತಿವೆ. ಯಾವ ಪ್ರಯತ್ನಕ್ಕೂ ಸಹ ನಿದ್ದೆ ಸಹಕರಿಸುತ್ತಿಲ್ಲ . ಆದರೂ ಕಣ್ಣು ಮುಚ್ಚಿ ಮಲಗಿದಳು.
* * *
ಆ ದಿನ ಮನೆಯಲ್ಲೇ ಕಳೆದು ಬೇಜಾರು ಬಂದು ಪಾರ್ಕ್ ಬಳಿಗೆ ಧಾವಿಸಿದಳು ವ್ರಿದ್ಧಿ. ಪಾರ್ಕ್ ನ ಮೂಲೆಯ ಬೆಂಚ್ ಒಂದರಲ್ಲಿ ಕುಳಿತು ಅಲ್ಲೇ ಆಡುತ್ತಿದ್ದ ಮಿಂಚಿನ ವೇಗದ ಅಳಿಲು ಮರಿಗಳನ್ನು ಎವೆಯಿಕ್ಕದೆ ನೋಡುತ್ತಾ ಕುಳಿತಳು.
ಅಷ್ಟರಲ್ಲೇ ಸುಮಾರು ನಾಲ್ಕೈದು ವರ್ಷದ ಮಗುವೊಂದು ಸದ್ದು ಮಾಡದೆಯೇ ವ್ರಿದ್ಧಿ ಕುಳಿತಿದ್ದ ಬೆಂಚಿನ ತುದಿಯಲ್ಲಿ ಸುಮ್ಮನೆ ಬಂದು ಕುಳಿತಿತು. ಬೇರೆಲ್ಲೋ ಗಮನವಿದ್ದ ವ್ರಿದ್ಧಿ ಒಮ್ಮೆಲೇ ಆ ಮಗುವಿನ ಕಡೆ ನೋಡಿ ಬೆಚ್ಚಿಬಿದ್ದು , ಮತ್ತೆಸುಧಾರಿಸಿಕೊಂಡು ," ಹಾಯ್ ....ಯಾರು ನೀನು, ಏನು ಹೆಸರು " ಎಂದು ನಗುತ್ತ , ಮುದ್ದಾಗಿ ಆ ಮಗುವನ್ನು ಪ್ರಶ್ನಿಸಿದಳು. ಮಗು ಮುಖ ಎತ್ತಿಯು ಸಹ ನೋಡಲಿಲ್ಲ . ತಲೆ ಬಗ್ಗಿಸಿ ನೆಲವನ್ನೇ ನೋಡುತ್ತಾ ಏನು ಕೆಳದವರಂತೆ ಕುಳಿತಿತ್ತು .ನಾಲ್ಕಾರು ಬಾರಿ ವ್ರಿದ್ಧಿ ಆ ಮಗುವನ್ನು ಮಾತನಾಡಿಸುವ ಪ್ರಯತ್ನ ಮಾಡಿದರು ಸಹ ಅದು ಪ್ರತಿಕ್ರಿಯೆ ನೀಡದಿರುವುದನ್ನು ನೋಡಿ ಸುಮ್ಮನಾಗಿ ಬೇರೆಡೆ ಗಮನಹರಿಸಿದಳು.
" ಎಲ್ಲ ...ನಿನ್ನಿಂದಾನೆ ಆಗಿದ್ದು ... ಎಲ್ಲ ನೀನೆ ಮಾಡಿದ್ದೂ " ಎಂಬ ಧ್ವನಿ ಒಮ್ಮೆಲೇ ಆ ಮಗುವಿನಿಂದ ಕೇಳಿ ಬಂದ ತಕ್ಷಣ ಹೆದರಿ ಎದ್ದು ನಿಂತು ಆ ಮಗುವಿನ ಹತ್ತಿರಕ್ಕೆ ನಡೆದು ಕೇಳಿದಳು .
"ನಾನೇನ್ ಮಾಡಿದೆ ನಿಂಗೆ" ಅಂತ .
"ಕಾರ್ ನಿಲ್ಸಿ , ಕೆಳಗೆ ಇಳ್ದು ನೋಡಬಹುದಿತ್ತು ತಾನೇ ...? , ನಾನಿನ್ನು ಸತ್ತಿರಲಿಲ್ಲ , ಕಾರಿನ ಕೆಳಗೆ ಬಿದ್ದಿದ್ದೆ ಅಷ್ಟೇ , ನೀವು ಹೊರಟಮೇಲೆ ಕಾರಿನ ಚಕ್ರ ನನ್ನ್ನ ತಲೆ ಮೇಲೆ ಹತ್ತಿ ಹೋಯ್ತು ". ಎಂದು ಮುಖ ತಗ್ಗಿಸಿಕೊಂಡು ನೆಲವನ್ನೇನೋಡುತ್ತಾ ಹೇಳಿತು ಆ ಮಗು.
" ಯಾರು ಪುಟ್ಟ ನೀನು ..? ಯಾಕೆ ಹೀಗೆ ಏನೇನೋ ಮಾತಾಡ್ತಾ ಇದ್ದೀಯ ..? ಇಲ್ನೋಡು ಪುಟ್ಟ " ಎನ್ನುತ್ತಾ , ಮಗುವಿನ ಗಲ್ಲವನ್ನು ಕೈಯಲ್ಲಿ ಹಿಡಿದು ಮೇಲೆತ್ತುತ್ತಲೇ , ಮಗುವಿನ ಕುತ್ತಿಗೆಯ ಭಾಗ ಕಳಚಿ ಕೈ ಗೆ ಬಂತು . ತಲೆ ಇಲ್ಲದ ರುಂಡಬೆಂಚಿನ ಕೆಳಗೆ ಮಗುಚಿ ಬಿತ್ತು .
ಬೆಳಿಗ್ಗೆ ಬೇಗ ಎದ್ದು ಮತ್ತೆ ಆಫೀಸಿಗೆ ಕ್ಯಾಬ್ ಏರಿ ಹೊರಟ ವ್ರಿದ್ಧಿ, ಕ್ಯಾಬ್ ನಲ್ಲಿ ಕುಳಿತೇ ....ನಿನ್ನೆ ಘಟನೆ ನಡೆದ ಸ್ಥಳವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದಳು. ಎಲ್ಲವೂ ಕೂಡ ಸಾಮಾನ್ಯವಾಗಿರುವುದನ್ನು ಕಂಡು ನೆಮ್ಮದಿಯಾಯಿತು .ಯಾಕೋ ಆಕೆಯ ಮೇಲೆಯೇ ಆಕೆಗೆ ನಗು, ಮನಸಿನೊಳಗೆಯೇ ಮುಸಿ ಮುಸಿ ನಕ್ಕಳು.
'ನೀನಿರಲು ಜೊತೆಯಲ್ಲಿ ......ಬಾಳೆಲ್ಲ ಹಸಿರಾದಂತೆ ......'. ಎಂಬ ಗೀತೆಯನ್ನು ಹೊತ್ತುಕೊಂಡು ಕ್ಯಾಬ್ ಆಫೀಸಿನೆಡೆಗೆ ಸಾಗಿತ್ತು ...!!
✍️ಸಚಿನ್ ಶೃಂಗೇರಿ
Comments
Post a Comment