ಮೈಲಾರಿಯ ಕೊಲೆಯ ಹಿಂದೆ :
ದೂರದೂರಿನಲ್ಲಿ ಕೊಂಚ ಮುಖ್ಯ ಕೆಲಸವಿದ್ದಿದ್ದರಿಂದ ಮುಂಜಾನೆ ಎಳು ಗಂಟೆಯ ಸುಮಾರಿಗೆ ನನ್ನ ಮೋಟಾರ್ ಬೈಕ್ ಹಿಡಿದು ಮನೆ ಬಿಟ್ಟಿದ್ದೆ . ಮನೆಯಿಂದ ಹೊರಟು ಇನ್ನೇನು ಬಹುಶ ಎಂಟರಿಂದ ಹತ್ತು ಮೈಲು ಕ್ರಮಿಸಿರಬಹುದೇನೋ ಅಷ್ಟರಲ್ಲೇ ಎಡ ಜೇಬಿನಲ್ಲಿದ್ದ ಮೊಬೈಲ್ ಫೋನ್ ರಿಂಗಣಿಸತೊಡಗಿತ್ತು. ಬೈಕ್ ಓಡಿಸುವಾಗ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುವ ನಾನು ಅಂದೇಕೋ ಮನಸ್ಸು ಕೇಳದೆ ಬೈಕ್ ಬದಿ ನಿಲ್ಲಿಸಿ ಕರೆಯನ್ನು ಸ್ವೀಕರಿಸಿದ್ದೆ . ಆ ಕರೆ ನನ್ನ ಮನೆಯಿಂದ ಬಂದಿತ್ತು . ಕರೆ ಸ್ವೀಕರಿಸಿ ಕಿವಿಗಿಟ್ಟೊಡನೆ ಮೊದಲು ಕೇಳಿ ಬಂದ ಮಾತು “ಎಲ್ಲಿದ್ದೀಯ, ಮೈಲಾರಿಯ ಕೊಲೆ ಆಗಿದೆಯಂತೆ , ಯಾರೋ ಕೊಚ್ಚಿ ಸಾಯಿಸಿದ್ದಾರಂತೆ, ಗಣಪತಿ ದೇವಸ್ಥಾನಕ್ಕೆ ಹೋಗುವ ಒಳದಾರಿಯ ಹತ್ತಿರ, ನೀನು ವಾಪಸ್ ಬಾ, ಹಲೋ ಹಲೋ ಕೇಳ್ತಾ ಇದ್ಯಾ” ಎಂದು ಒಂದೇ ಉಸಿರಿನಲ್ಲಿ ಅಪ್ಪ ಆಕಡೆಯಿಂದ ಉಸುರಿಬಿಟ್ಟರು. “ಸರಿ ಆಯ್ತು” ಎಂದು ಮರು ಉತ್ತರ ನೀಡಿ ಬೈಕ್ ವಾಪಾಸ್ ತಿರುಗಿಸಿಬಿಟ್ಟೆ.
ಮೈಲಾರಿ ನಮ್ಮೂರಿನ ಮೂವತ್ತಾರರ ಬಡ ಯುವಕ. ಅತಿಯಾದ ಕುಡಿತದ ಚಟದಿಂದಲೇ ಆತ ಬಡವನಾಗಿ ಹೋಗಿದ್ದ ಎಂದರೆ ತಪ್ಪಾಗಲಾರದು.ತಂದೆ-ತಾಯಿ, ಹೆಂಡತಿ ಮಕ್ಕಳೆಂಬ ಯಾವುದೇ ಹಂಗಿಗೂ ಸಿಲುಕಿಕೊಳ್ಳದೇ, ಇದ್ದ ಒಬ್ಬ ತಮ್ಮನೊಂದಿಗೂ ವೈಮನಸ್ಸು ಮಾಡಿಕೊಂಡಿದ್ದ.
ತನ್ನ ಪಾಲಿಗಿದ್ದ ಎರಡು ಎಕರೆ ಕೃಷಿ ಭೂಮಿಯನ್ನು ಕೂಡ ಹಾಳುಗೆಡವಿ ಕಂಡ ಕಂಡವರ ಮನೆಯಲ್ಲಿ ನಾಲ್ಕಾರು ದಿನ ಕೆಲಸ ಮಾಡಿ ಮೂರು ಹೊತ್ತಿನ ಊಟಕ್ಕೆ ಮದ್ಯಕ್ಕೆ ಒಂದು ದಾರಿ ಮಾಡಿಕೊಂಡು ಕೆಲಸಮಯದ ನಂತರ ಏನಾದರೊಂದು ನೆವ ಹೇಳಿ ಆ ಕೆಲಸವನ್ನು ಬಿಟ್ಟು ಬೇರೆಡೆ ಸಾಗುತ್ತಿದ್ದವನಿಗೆ ಅದ್ಯಾರೋ ಪುಣ್ಯಾತ್ಮರು ಹೊಸದೊಂದು ಕೆಲಸವನ್ನು ಈತನ ಬೆನ್ನಿಗೆ ಹಚ್ಚಿದ್ದರು. ಅದೇನೆಂದರೆ, ಬೆಳಗಿನಜಾವ ನಾಲ್ಕು ಗಂಟೆಗೆ ನಮ್ಮೂರಿನಿಂದ ಸುಮಾರು ಹದಿನೈದು ಕಿಲೋಮೀಟರು ದೂರವಿದ್ದ ಪೇಟೆಗೆ ಹೋಗಿ ಹಾಲಿನ ಪ್ಯಾಕೆಟ್ಗಳನ್ನು ತಂದು ನಮ್ಮೂರು ಮತ್ತು ನಮ್ಮೂರಿನ ಸುತ್ತಮುತ್ತಲಿನ ನಾಲ್ಕೈದು ಊರಿನಲ್ಲಿರುವ ಸುಮಾರು ನಲವತ್ತರಿಂದ ಐವತ್ತು ಮನೆಗಳಿಗೆ ನಿತ್ಯ ಬೆಳಿಗ್ಗೆ ಹಾಲು ಸರಬರಾಜು ಮಾಡುವುದು. ಈ ಕೆಲಸವನ್ನು ಮಾತ್ರ ಕಳೆದ ನಾಲ್ಕಾರು ತಿಂಗಳುಗಳಿಂದ ಊರಿನ ಜನರೆಲ್ಲರೂ ಶಹಬ್ಬಾಶ್ ಎನ್ನುವಂತೆ ಮಾಡಿಕೊಂಡು ಬಂದಿದ್ದ. ಈ ಹುಮ್ಮಸ್ಸಿಗೆ ಕಾರಣವೂ ಇತ್ತು, ಬಿಸಿಲು ಬೆಂಕಿ ಎನ್ನದೆ ಕೆಲಸ ಮಾಡುವ ಪ್ರಮೇಯ ಇರಲಿಲ್ಲ , ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಟವನು ಸುಮಾರು ಹತ್ತು ಗಂಟೆಯಷ್ಟರಲ್ಲಿ ಕೆಲಸ ಪೂರೈಸಿ ಮನೆಗೆ ಬಂದು ಹಂಡೆಗಟ್ಟಲೆ ಶರಾಬು ಹೀರಿ ಕಾಲು ನೀಡಿ ಮನೆಯಲ್ಲೇ ಬಿದ್ದಿರುತ್ತಿದ್ದ ಮರುದಿನ ಬೆಳಿಗ್ಗಿನವರೆಗೆ. ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಗಿತ್ತು ಮೈಲಾರಿಯ ಜೀವನ. ಈ ಕಾರ್ಯಕ್ಕಾಗಿ ಅವರಿವರ ಶಿಫಾರಸ್ಸಿನ ಮೇರೆಗೆ ಸ್ಥಳೀಯ ಬ್ಯಾಂಕ್ ಒಂದರಿಂದ ಸಾಲ ಪಡೆದು ಟಿವಿಎಸ್ ಮೊಪೆಡ್ ಒಂದನ್ನು ಖರೀದಿಸಿದ್ದ. ಟಿವಿಎಸ್ ಬೈಕ್ನ ಮೇಲೆ ಕಂದು ಬಣ್ಣದ ಸ್ವೇಟರ್ ಧರಿಸಿ,ತಲೆಗೆ ಟೊಪ್ಪಿಗೆಯೊಂದನ್ನು ಕಟ್ಟಿ , ಬೈಕ್
ನ ಹಿಂಬಾಗಕ್ಕೆ ನೀಲಿ ಬಣ್ಣದ ಬಾಸ್ಕೆಟ್ ಒಂದನ್ನು ಬಿಗಿದು ಅದರಲ್ಲಿ ಹಾಲಿನ ಪ್ಯಾಕೆಟ್ಗಳನ್ನು ತುಂಬಿಸಿಕೊಂಡು ಗತ್ತಿನಿಂದ ಬರುತ್ತಿದ ಮೈಲಾರಿಯನ್ನು ಊರಿನ ನಾಲ್ಕು ಜನರು ನಿಬ್ಬೆರಗಾಗಿ ನೋಡುವಂತಾಗಿತ್ತು.
ಮೈಲಾರಿಯ ಸಾವಿನ ಸುದ್ದಿ ನನ್ನನ್ನೇನು ಅಷ್ಟಾಗಿ ಚಕಿತಗೊಳಿಸಲಿಲ್ಲ. ಅಲ್ಲದೆ ನನ್ನ ಮತ್ತು ಅವನ ನಡುವೆ ಇದ್ದಿದ್ದು ನಾಲ್ಕೈದು ಬಾರಿಯ ಜಗಳ ,ದ್ವೇಷದ ಪರಿಚಯವೇ ಹೊರತು ಹೇಳಿಕೊಳ್ಳುವಂತಹದ್ದು ಏನು ಇರಲಿಲ್ಲ. ನನ್ನ ಮತ್ತು ಅವನ ವೈಮನಸ್ಸಿನ ವಿಚಾರ ಊರಿಗೆಲ್ಲ ತಿಳಿದದ್ದೇ ಆಗಿತ್ತು. ಕಳೆದಬಾರಿಯೊಮ್ಮೆ ,ನೀನೇನಾದರೂ ಸತ್ತರೆ ನನ್ನ ಕೈಯಿಂದಲೇ ಎಂದು ನಾನು ಅವನಿಗೆ ಹೇಳಿದ ಮಾತು ನಾಲ್ಕಾರು ಜನ ಕೇಳಿಸಿಕೊಂಡಿರುವುದರ ವಿಚಾರ ನನ್ನನ್ನು ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಕಂಗೆಡುವಂತೆ ಮಾಡಿತ್ತು.
ಮೈಲಾರಿಯ ಕೊಲೆಯಾದ ಸ್ಥಳದ ಹತ್ತಿರ ಬಂದು ಬೈಕ್ ನಿಲ್ಲಿಸಿದೆ . ಮುಖ್ಯರಸ್ತೆಯಿಂದ ಟಿಸಿಲೊಡೆದಿದ್ದ ಎಡಬಾಗದ ಕಿರುದಾರಿಯಲ್ಲಿ ಹತ್ತಾರು ಊರಿನ ಜನರು,ನಾಲ್ಕು ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಸಬ್-ಇನ್ಸ್ಪೆಕ್ಟರ್ ನಿಂತಿರುವುದನ್ನು ಕಂಡು ಆಕಡೆ ನಡೆದೆ.
“ನಾನು ಹುಟ್ಟಿದ್ಮೇಲೆ ಈ ಊರಲ್ಲಿ ಇದೆ ಮೊದ್ಲು ಈತರದ್ದು ನೋಡಿದ್ದು “ , “ ಮಚ್ಚಿನಲ್ಲೇ ಹೊಡೆದಿರೋದು “, “ಮನುಷ್ಯನಾದವನು ನೋಡೋಕೆ ಸಾಧ್ಯ ಇಲ್ಲಪ್ಪ “ , “ ಇವನನ್ನ ಕೊಲ್ಲೋಕೆ ಕಾರ್ಣನಾದ್ರು ಏನು ಅಂತ ಅರ್ಥ ಆಗ್ತಿಲ್ವಲರಿ”, “ ಹೊಯ್ ರಕ್ತ ತುಳಿಬೇಡಿ ಈಕಡೆ ಬನ್ನಿ “ ಎನ್ನುವ ಗುಸುಪಿಸು ಮಾತುಗಳು ನೆರೆದಿದ್ದ ಜನರ ಗುಂಪಿನಿಂದ ಕೇಳಿಬರುತ್ತಿದ್ದವು.
ಮೃತದೇಹದ ಹತ್ತಿರ ಸಮೀಪಿಸುತ್ತಿದ್ದಂತೆ “ ಹಾ ಸಾರ್ ಇವ್ರೇ ಇವ್ರೇ” ಎಂದು ಪೊಲೀಸ್ನವರಿಗೆ ನನ್ನನ್ನು ನಮ್ಮೂರಿನವ ಒಬ್ಬ ತೋರಿಸಿದ್ದನ್ನು ಮತ್ತು ಆ ಪೊಲೀಸ್ ಪೇದೆ ನನ್ನ ನಡೆಯನ್ನು ತೀವ್ರವಾಗಿ ಗಮನಿಸುತ್ತಿರುವುದನ್ನು ಗಮನಿಸಿಯೂ ಗಮನಿಸದಂತೆ ಮೃತದೇಹದ ತೀರಾ ಹತ್ತಿರಕೆ ನಡೆದುಬಿಟ್ಟೆ .
ಮೃತದೇಹ ಬಿದ್ದಿದ್ದ ಸುತ್ತಲಿನ ಹತ್ತು ಅಂಗುಲದಷ್ಟು ಜಾಗವನ್ನು ಗುರುತುಮಾಡಿ ಯಾರು ಪ್ರವೇಶಿಸದಂತೆ ತಡೆ ಹಿಡಿದಿದ್ದರು ಪೋಲಿಸಿನವರು. ಮೈಲಾರಿ ಉಟ್ಟಿದ್ದ ಲುಂಗಿಯನ್ನೇ ಅರೆಬರೆಯಾಗಿ ಆತನ ಮೇಲೆ ಮುಚ್ಚಲಾಗಿತ್ತು . ಆತನ ಟಿವಿಎಸ್ ಮೊಪೆಡ್ ಮರದ ಬೊಡ್ಡೆಯೊಂದಕ್ಕೆ ಆತು ಮಲಗಿತ್ತು , ಬಲಬಾಗದ ಇಂಡಿಕೇಟರ್ ಉರಿಯುತ್ತಲ್ಲೇ ಇತ್ತು , ಮೈಲಾರಿಯಾ ಮುಖಕ್ಕೆ ಮಚ್ಚಿನಿಂದ ಬಲವಾಗಿ ಹೊಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು . ಮಚ್ಚಿನ ಏಟು ಎಡಕಿವಿಯ ಕೆಳಬಾಗದಿಂದ ಬಲಕುತ್ತಿಗೆಯ ಕೆಳಬಾಗದವರೆಗೆ ಸೀಳಿಕೊಂಡು ಹೋಗಿ ಸಂಪೂರ್ಣ ಕೆಳದವಡೆ ಮುಖಕ್ಕೆ ನೇತು ಬಿದ್ದು ಕಿರುನಾಲಿಗೆಯವರೆಗೂ ಬಾಯಿತೆರೆದುಕೊಂಡು ಮುಖ ಅರಳಿದ ದಾಸವಾಳ ಹೂವಿನಂತೆ ಕಾಣುತ್ತಿತ್ತು, ಸುರಿದ ರಕ್ತವೆಲ್ಲ ನೆಲದಲ್ಲಿ ಇಂಗಿ ಹೋಗಿ , ಕೆಲವೆಡೆಯಲ್ಲಿ ಹೆಪ್ಪುಗಟ್ಟಿದ ರಕ್ತ ಕಪ್ಪು ಕಪ್ಪಾಗಿ ಅಲ್ಲಲ್ಲಿ ಬಿದ್ದಿತ್ತು. ಕೇವಲ ಒಂದೇ ಏಟಿಗೆ ಮಿಸುಕಾಡದೆ ಉಸಿರು ಚೆಲ್ಲಿದ್ದಾನೆ ಎನ್ನುವುದು ಅಂಗಾತನೆ ಕೈಕಾಲು ನಿಟ್ಟಿರಿಸಿ ಬಿದ್ದಿದ್ದ ಆತನ ದೇಹ ನೋಡಿ ತಿಳಿಯಬಹುದಿತ್ತು .
ಆತನನನ್ನೇ ನೋಡುತ್ತಾ ನಿಂತಿದ್ದಾಗ ನನ್ನ ಬಳಿ ಬಂದ ಪೊಲೀಸ್ ಪೇದೆಯೊಬ್ಬ “ ನೀವು ಇಲ್ಲೇ ಇರಬೇಕು , ಎಲ್ಲಿಗೂ ಹೋಗೋ ಹಾಗಿಲ್ಲ ನಾವು ಹೇಳೋವರೆಗೆ “ ಎಂದು ತಾಕೀತು ಮಾಡಿದ “ ಯಾಕೆ “ ಕೇಳಿದೆ, “ ಅದೆಲ್ಲ ಇನ್ಸ್ಪೆಕ್ಟರ್ ಹೇಳ್ತಾರೆ “ ಎಂದು ದೂರ ನಡೆದ . ಅಷ್ಟರಲ್ಲೇ ನನ್ನ ಬಳಿ ಬಂದ ಇನ್ಸ್ಪೆಕ್ಟರ್ “ ಏನ್ರಿ ನಿಮ್ ಬೈಕ್ನಲ್ಲೆ ಬರ್ತಿರೋ ಅಥವಾ ನಮ ಜೀಪ್ ಹತ್ತುತ್ತಿರೋ ..?” ಎಂದು ಕೇಳಿದರು . “ಎಲ್ಲಿಗೆ ಸಾರ್” ಕೇಳಿದೆ ,“ ಇನ್ನೆಲ್ಲಿ ಸ್ಟೇಷನ್ ಗೆ , ತಡ ಮಾಡದೆ ಬೇಗ ಬಂದರೆ ಒಳ್ಳೇದು , ಯಾಕೆ ಏನು ಅಂತ ಅಲ್ಲೇ ಹೇಳ್ತಿವಿ , ಜಾಸ್ತಿ ಮಾತನಾಡದೆ ಬೇಗ ಬಂದ್ರೆ ಕೆಲಸ ಬೇಗ ಮುಗಿಯುತ್ತೆ ” ಎಂದರು. ಸರಿ ಬರ್ತೀನಿ ನಿಮ್ ಹಿಂದೇನೆ ಸಾರ್ ಎಂದು ನನ್ನ ಬೈಕ್ ಬಳಿ ನಡೆದೆ. “ ಬಾಡಿ ನ ಪೋಸ್ಟ್ ಮಾರ್ಟಮ್ ಗೆ ತಗೊಂಡ್ ಹೋದ ತಕ್ಷಣ ನಂಗೆ ಫೋನ್ ಮಾಡಿ , ನೀವಿಬ್ರು ಇಲ್ಲಿರಿ “ ಎಂದು ಇಬ್ಬರು ಪೇದೆಗಳನ್ನು ಅಲ್ಲೇ ಇರಲು ಹೇಳಿ ಇನ್ಸ್ಪೆಕ್ಟರ್ ಉಳಿದ ಪೇದೆಗಳ ಜೊತೆ ಜೀಪ್ ಹತ್ತಿ ನನ್ನನ್ನು ಹಿಂದೆ ಬಾ ಎಂದು ಕೈಸನ್ನೆ ಮಾಡಿದರು . ಊರಿನ ಜನರೆಲ್ಲಾ ನನ್ನನ್ನೇ ಬೆರಗಾಗಿ ನೋಡುತ್ತಿರುವುದನ್ನು ಗಮನಿಸಿ ಯಾರ ಮುಖವನ್ನೂ ನೋಡದೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಜೀಪನ್ನು ಹಿಂಬಾಲಿಸಿ ಹೊರಟೆ.
ಮೈಲಾರಿಗೂ ನನಗೂ ಇದ್ದ ಹಳೇ ವೈಷಮ್ಯದ ವಿಷಯಗಳನ್ನ , ನಮ್ಮ ನಡುವೆ ನಡಿದಿದ್ದ ಸಾರ್ವಜನಿಕ ಜಗಳಗಳನ್ನೂ ಪೋಲೀಸಿನವರ ಬಳಿ ಊರಿನ ಹತ್ತು ಸಮಸ್ತರು ಸೇರಿ ಕಾಲು ಬಾಲ ಸೇರಿಸಿ ತುತ್ತೂರಿ ಊದಿರುವುದು ಆ ಕ್ಷಣಕ್ಕೆ ನನಗೆ ಸ್ಪಷ್ಟವಾಯಿತು. ಮುಂದೆ ಎದುರಾಗಬಹುದಾದ ಸಂದರ್ಭಗಳನ್ನೆಲ್ಲ ಊಹಿಸಿ ಮಾನಸಿಕವಾಗಿ ಸಿದ್ಧವಾಗತೊಡಗಿದೆ. ಪೋಲೀಸಿನವರ ಎದುರಿನ ಒಂದು ಸಣ್ಣ ಅವಿವೇಕ ನಡತೆಯು ನನ್ನನ್ನ ಈ ಕೋರ್ಟು ಕಛೇರಿಯ ಕೂಪಕ್ಕೆ ತಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲಾ ಎಂದು ಸ್ಪಷ್ಟವಾಯ್ತು.ಏನಾಗುವುದೋ ಆಗಿಯೇ ಬಿಡಲಿ ನೋಡೋಣ ಎಂದು ಸ್ಟೇಷನ್ಗೆ. ನಡೆದುಬಿಟ್ಟೆ .......
ಸಬೀನ್ಸ್ಪೆಕ್ಟ್ರ್ ದರ್ಪ ನನ್ನ ಮೈ ಎಲ್ಲ ಉರಿಯುವಂತೆ ಮಾಡಿತ್ತು . ಠಾಣೆಗೆಯಲ್ಲಿನ ಆತನ ಕೊಠಡಿಯೊಳಗೆ ಕರೆದೊಯ್ದು ಆತನ ಎದುರು ಕುರ್ಚಿಯಲ್ಲಿ ನನ್ನನ್ನು ಕುಳ್ಳಿರಿಸಿ ಸಿಗರೇಟ್ ಒಂದನ್ನು ಹಚ್ಚಿ ಹೊಗೆಯನ್ನು ನನ್ನ ಮುಖದೆಡೆಗೆ ಊದುತ್ತ ನನ್ನೆದುರು ಬಂದು ಕುಳಿತ.
"ಏನಯ್ಯ ರಾಜ್ಕುಮಾರ , ಏನ್ ಹೀರೊ ಅನ್ಕೊಂಡಿದ್ಯಾ , ನಾವೇನ್ ಗೂಬೆಗಳ್ ತರ ಕಾಣ್ತೀವ ನಿಂಗೆ ...? ನಾಲ್ಕ್ ಜನರೆದ್ರಿಗೆ ಏನೋ ಹೇಳ್ಬಿಟ್ಟ ಅಂತ ಸೀದಾ ಹೋಗಿ ಕೊಲೆನೆ ಮಾಡ್ಬಿಡೋದ , ಬಿಸಿ ರಕ್ತ ಅಲ್ವಾ .... ಜೈಲ್ನಲ್ಲಿ ಬಾತ್ರೂಮ್ ಉಜ್ಜಿ, ರಾಗಿ ಬೀಸಿದ್ರೆ ಎಲ್ಲದು ಇಳಿಯುತ್ತೆ ನನ್ ಮಕ್ಳ ನಿಮಗೆ, ಅದೇನ್ ಆಯ್ತೋ ಎಲ್ಲ ಒದ್ರು ಇವಾಗ್ಲೆ ... ಸತ್ಯ ಹೇಳಿದ್ರೆ ಬದ್ಕೊತಿಯ,ಎಲ್ಲಾದ್ರೂ ಗಾಂಚಲಿ ಮಾಡಿದ್ರೆ ಗ್ರಾಚಾರ ಬಿಡ್ಸ್ತೀನಿ ಲೋಪರ್ ನನ್ನ್ ಮಗ್ನೆ " ಎಂದು ತನಗಿಷ್ಟ ಬಂದಂತೆ ಒರಳುತ್ತಿದ್ದ .
ಇನ್ಸ್ಪೆಕ್ಟ್ರ್ ಮುಖವನ್ನೇ ದಿಟ್ಟಿಸಿ ಕುಳಿತಿದ್ದ ನಾನು .." ನೋಡಿ ಸಾರ್ ನೀವ್ ಏನಕ್ಕೆ ಈತರ ಮಾತಾಡ್ತಿದೀರೋ ಗೊತ್ತಿಲ್ಲ ನನಗೂ ಈ ಕೊಲೆಗೂ ಸಂಬಂಧ ಇಲ್ಲ , ಯಾರದೋ ಮಾತು ಕೇಳ್ಕೊಂಡು ಅದನ್ನೇ ನಂಬ್ಕೊಂಡಿದೀರಾ ನೀವು ಅಷ್ಟೇ . ನನಗೂ ಮೈಲಾರಿಗೂ ವೈಷಮ್ಯ ಇದ್ದಿದ್ದಂತೂ ಸತ್ಯ, ಆದರೆ ಕೊಲೆ ಮಾಡುವ ಮಟ್ಟದ್ದಂತೂ ಖಂಡಿತ ಅಲ್ಲ . ಒಟ್ಟಾರೆಯಾಗಿ ಆತನ ಮೇಲೆ ನಂಗಿದ್ದ ಭಾವನೆ ಎಂದರೆ ಕೇವಲ ನಿರ್ಲಕ್ಷ್ಯ ಅಷ್ಟೇ. ಅದೂ ಅಲ್ಲದೆ ಆತನನ್ನು ಕೊಲೆ ಮಾಡಿ ನನ್ನ ಅರ್ಧ ಆಯಸ್ಸು ಜೈಲು , ಕೋರ್ಟು , ಕಛೇರಿಗಳಲ್ಲಿ ವ್ಯರ್ಥ ಮಾಡುವಷ್ಟು ಮೂರ್ಖನು ನಾನಲ್ಲ , ಮತ್ತು ಪೊtಲೀಸ್ ನವರನ್ನು ಮೂರ್ಖರು ಎಂದು ತಿಳಿಯುವಷ್ಟು ತಿಳಿಗೇಡಿತನವು ನನಗೆ ಬಂದಿಲ್ಲ , ನೀವು ಹೇಳಿದ್ದಕ್ಕೆ ಹೇಳ್ದೆ ಅಷ್ಟೇ ತಪ್ಪು ತಿಳಿಬೇಡಿ " ಎಂದು ಎರಡು ಕೈಗಳನ್ನು ಎದುರಿಗಿದ್ದ ಟೇಬಲ್ ಮೇಲೆಇಟ್ಟು ಆತನ ಮುಖವನ್ನೇ ನೋಡುತ್ತಾ ಕುಳಿತೆ .
ನನ್ನ ಮಾತು ನಡತೆಯನ್ನೇ ಸೂಕ್ಷ್ಮವಾಗಿ ಕಣ್ಣು ಮುಚ್ಚದೇ ದಿಟ್ಟಿಸಿ ಗಮನಿಸುತ್ತಿದ್ದ ಇನ್ಸ್ಪೆಕ್ಟ್ರ್ನ ನ ಕೈಬೆರಳು ಗಳ ಮದ್ಯೆ ಇದ್ದ ಸಿಗರೇಟ್ ತಂತಾನೆ ಉರಿದು ಬುಡಕ್ಕೆ ಬಂದು ಆತನ ಕೈಬೆರಳನ್ನು ಚುರಕ್ ಎಂದು ಸುಟ್ಟೊಡನೆಯೇ " ಥುತ್ " ಎಂದು ಸಿಗರೇಟನ್ನು ಕಸದ ಬುಟ್ಟಿಗೆ ಎಸೆಯುತ್ತ ಮಾತು ಶುರುಮಾಡಿಕೊಂಡ " ಸರಿ , ಹಾಗಾದರೆ ಹದಿನೈದು ದಿನಗಳ ಹಿಂದೆ ಕಾಲೇಜಿಗೆ ಹೋಗಿಬರುತ್ತಿದ್ದ ನಿನ್ನ ತಂಗಿಯನ್ನು ಚುಡಾಯಿಸಿದ್ದಾನೆ ಎಂದು ಆ ದಿನ ಸಂಜೆ ಸಾರ್ವಜನಿಕವಾಗಿ ಆತನ ಮೇಲೆ ಹಲ್ಲೆ ಮಾಡಿ , 'ನೀನು ಸತ್ತರೆ ನನ್ನ ಕೈಯಿಂದಲೇ ' ಎಲ್ಲರ ಎದುರು ನೀನು ಹೇಳಿ ಬಂದಿದ್ದು , ಅದಾದ ನಂತರ ಪದೇ ಪದೇ ಅವನ ಬಳಿ ಜಗಳ ಕಾದಿದ್ದು ಸುಳ್ಳು ಅಂತೀಯಾ ...?" "ಇದೆಲ್ಲದಕ್ಕಿಂತ ಮುಖ್ಯವಾಗಿ ಈವತ್ತು ಬೆಳಗಿನಜಾವ ನಾಲ್ಕು ಗಂಟೆಯ ಸುಮಾರಿಗೆ ಅಂದರೆ ಮೈಲಾರಿ ಪೇಟೆಗೆ ಹೊರಡುವ ಸಮಯದಲ್ಲಿ .... ಮೈಲಾರಿಯ ಕೊಲೆಯಾಗಿರುವ ಆಸುಪಾಸಿನಲ್ಲಿ ನಿನಗೇನೂ ಕೆಲಸ ಇತ್ತು ... ನೀನೇನು ಮಾಡುತ್ತಿದ್ದೆ . ನೀನು ಆ ರಸ್ತೆಯಲ್ಲಿ ಹೋಗುತ್ತಿದ್ದನ್ನು ಕಣ್ಣಾರೆ ನೋಡಿದವರು ಇದ್ದಾರೆ ...ಇದಕ್ಕೇನಂತೀಯಾ " ಎಂದು ಮುಖವನ್ನು ಕೆಳಬಾಗಕ್ಕೆ ವಾಲಿಸಿಕೊಂಡು ಹುಬ್ಬಿನ ಸಮೇತ ಕಣ್ಣನ್ನು ಮೇಲಿತ್ತಿ ನನ್ನನ್ನೇ ನೋಡುತ್ತಾ ಅರ್ಧ ತುಟಿಯ ನಗೆನಕ್ಕು ಮತ್ತೊಮ್ಮೆ ಕಣ್ಣುಬ್ಬು ಹಾರಿಸಿ ಪ್ರಶ್ನಿಸಿದ .
"ಆತ, ಕಾಲೇಜಿಗೆ ಹೋಗಿ ವಾಪಾಸ್ ಒಬ್ಬಳೇ ಬರುತ್ತಿದ್ದ ನನ್ನ ತಂಗಿಯನ್ನ ಚುಡಾಯಿಸಿದ್ದು ಹೌದು, ಅದನ್ನು ಆದಿನ ಸಂಜೆ ಅಂಗಡಿಯೊಂದರ ಬಳಿ ಆತ ನಿಂತಿದ್ದನ್ನು ನೋಡಿ ಹತ್ತಿರ ಹೋಗಿ ಕೇಳಿದೆ ... ನನಗೆ ಮಾತಿಗೆ ಅವಕಾಶವೇ ಕೊಡದ ಆತ ಅವಾಚ್ಯವಾಗಿ ನನ್ನೊಡನೆ ಮಾತಿಗಿಳಿದಾಗ ಆತನ ಕಪಾಳಕ್ಕೇ ಎರಡು ಬಿಗಿದು , 'ನೀನೇನಾದರೂ ಸತ್ತರೆ ಅದು ಕೇವಲ ನನ್ನ ಕೈಯಿಂದಲೇ' ಎಂದು ಹೇಳಿದ್ದು ಹೌದು , ಅದರ ಉದ್ದೇಶ ಕೇವಲ ಆತನಿಗೆ ಭಯ ಹುಟ್ಟಿಸುವದಾಗಿತ್ತೇ ವಿನಃ ಬೇರೇನೂ ಇರಿಲಿಲ್ಲ . ಈವತ್ತು ನಡೆದ ಆತನ ಕೊಲೆಗೂ ಮತ್ತು ಅಂದು ನಾನು ಆಡಿದ ಆ ಮಾತುಗಳಿಗೆ ಇರುವುದು ಕೇವಲ ಕಾಕತಾಳೀಯ ಸಂಬಂಧವೇ ಹೊರತು ಮತ್ತೇನು ಇಲ್ಲ ".
"ಮತ್ತೆ , ಈವತ್ತು ಬೆಳಿಗ್ಗೆ ನಾಲ್ಕು ಗಂಟೆಗೆ ಹೊತ್ತಿಗೆ ನಾನು ಮೈಲಾರಿಯ ಕೊಲೆಯಾದ ದಾರಿಯಲ್ಲಿ ಹೋಗಿಬಂದಿದ್ದು ಬಂದದ್ದು ಹೌದು . ಅದು ಕೇವಲ ಇವತ್ತಿನ ದಿನ ಮಾತ್ರವಲ್ಲ ಕಳೆದ ಹದಿನೈದು ದಿನಗಳಿಂದ ಬೆಳಗಿನ ಜಾವ ನಾಲ್ಕರಿಂದ ಐದು ಗಂಟೆಯ ಹೊತ್ತಿನಲ್ಲಿ ಆ ರಸ್ತೆಯಲ್ಲಿ ಹೋಗಿಬರುತ್ತಿದ್ದೇನೆ. ಅದಕ್ಕೆ ಕಾರಣವಿಷ್ಟೇ”.....
“ರಾಜ್ಯ ಪೊಲೀಸ್ ಇಲಾಖೆಯಿಂದ ಕಳೆದ ತಿಂಗಳು ಖಾಲಿ ಇರುವ ಸಬ್-ಇನ್ಸ್ಪೆಕ್ಟ್ರ್ ಹುದ್ದೆಗಳಿಗಾಗಿ ಕರೆಯಾಗಿದೆ . ಇದು ನಿಮಗೂ ಗೊತ್ತಿದೆ ಎಂದುಕೊಳ್ಳುತ್ತೇನೆ ,ಈ ಸಲುವಾಗಿ ನಾನು ಕೂಡ ಅರ್ಜಿ ಹಾಕಿದ್ದೇನೆ ಮತ್ತು ಮುಂದಿನ ತಿಂಗಳ ಕೊನೆಯ ವಾರದಲ್ಲಿ ದೈಹಿಕ ಪರೀಕ್ಷೆ ಇರೋದ್ರಿಂದ ಅದರ ತಯಾರಿಯ ಸಲುವಾಗಿ ಕಳೆದ ಹದಿನೈದು ದಿನಗಳಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಐದು ಕಿಲೋಮೀಟರ್ನಷ್ಟು ದೂರ ಓಡುತ್ತಿದ್ದೇನೆ . ಈ ಪರೀಕ್ಷೆ ಮತ್ತು ಇಂಟರ್ವ್ಯೂ ನ ವಿಚಾರವಾಗಿ ನಾನು ನಿಮ್ಮ ಬಳಿ ಬಂದು ಸಲಹೆ ಕೇಳಬೇಕೆಂದುಕೊಂಡಿದ್ದೆ ಆದರೆ ವಿಪರ್ಯಾಸ ನೋಡಿ ನನ್ನದು, ಈತರ ಬಂದು ನಿಮ್ಮೆದುರು ಕೂರಬೇಕಾಯ್ತು ಸಾರ್ . ಇವಿಷ್ಟು ನನಗೆ ಗೊತ್ತಿರುವ ಸತ್ಯ . ಇನ್ನುಳಿದದ್ದು ನಿಮಗೆ ಬಿಟ್ಟಿದ್ದು ಸಾರ್ .ಗೊತ್ತಿರೋದನ ಸ್ಪಷ್ಟವಾಗಿ ಹೇಳಿದ್ದೇನೆ " ಎಂದು ಸಬ್- ಇನ್ಸ್ಪೆಕ್ಟರ್ ಹುದ್ದೆಗೆ ನಾನು ಸಲ್ಲಿಸಿದ್ದ ಅರ್ಜಿಯ ವಿವರಗಳನ್ನು ಇನ್ನಿತರ ದಾಖಲೆಗಳನ್ನು ನನ್ನ ಮೊಬೈಲ್ ಫೋನ್ ಮೂಲಕ ತೋರಿಸಿದೆ .
ಮತ್ತೊಂದು ಸಿಗರೇಟ್ ನ ತುದಿಗೆ ಬೆಂಕಿ ಹಚ್ಚುತ್ತಾ ನಿಟ್ಟುಸಿರೊಂದನು ಹೊರ ಚೆಲ್ಲಿ " ಸರಿ ನೋಡೋಣ , ನೀನು ಸಲ್ಲಿಸಿರುವ ಅರ್ಜಿ ದಾಖಲೆಯ ಪ್ರತಿಗಳೆಲ್ಲವನ್ನು ನನಗು ಕೊಡು ... ಇವಾಗ ಹೊರಗಡೆ ಕೂತಿರು " ಎಂದು ಆತನ ಕೊಠಡಿಯಿಂದ ನನ್ನನ್ನು ಹೊರಕಳಿಸಿದ.
ಆದಿನ ಸಂಜೆ ಆರು ಗಂಟೆಯವರೆಗೆ ನನ್ನನ್ನು ಠಾಣೆಯಲ್ಲೇ ಕೂರಿಸಿಕೊಂಡು ಇಲ್ಲಸಲ್ಲದ ವಿಚಾರಣೆಗಳನ್ನು ನಡೆಸಿ ... ನನ್ನಿಂದ ಲಿಖಿತ ಹೇಳಿಕೆಯೊಂದನ್ನು ಪಡೆದು .."ಏನಾದರು ವಿಷಯ ಇದ್ರೆ ಫೋನ್ ಮಾಡ್ತೀವಿ , ತಪ್ಪದೇ ಬರ್ಬೇಕು , ಈವಾಗ್ ಹೊರಡಬಹುದು " ಎಂದರು .
"ಸಾರ್ , ಕೋಚಿಂಗ್ ನ ಸಲುವಾಗಿ ಮುಂದಿನ ವಾರ ಬೆಂಗ್ಳೂರ್ ಗೆ ಹೋಗ್ತಿದೀನಿ ... ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ , ನನ್ನ ಜೀವನದ ಪ್ರಶ್ನೆ ಸಾರ್ , ಏನಾದರು ವಿಷಯ ಬೇಕಾದಲ್ಲಿ ಫೋನ್ ಮೂಲಕವೇ ತಿಳಿಸುತ್ತೇನೆ " ಎಂದೆ .
"ಸರಿ ನೋಡೋಣ" ಎಂದು ಹೇಳಿ ಅವತ್ತಿಗೆ ನನ್ನನು ಬೀಳ್ಕೊಟ್ಟರು .
'ಬದುಕಿತು ಬಡಜೀವ ' ಎಂದುಕೊಂಡು ಹಸಿದು ಹೈರಾಣಾಗಿದ್ದ ನಾನು ಹೋಟೆಲ್ ಒಂದಕ್ಕೆ ನುಗ್ಗಿ ಎಷ್ಟೋ ಇಷ್ಟೋ ಎಂಬಂತೆ ತಿಂದು ಮನೆ ಕಡೆಗೆ ಬೈಕ್ ತಿರುಗಿಸಿ ನಡೆದುಬಿಟ್ಟೆ ., ಮೈಲಾರಿಯ ಪೋಸ್ಟ್ ಮಾರ್ಟಮ್ ಮುಗಿದ ನಂತರ ಆತನ ಮೃತದೇಹವನ್ನು ಪಡೆಯುವವರು ಯಾರು ಇಲ್ಲದಿದ್ದರಿಂದ , ಅಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿದ್ದ ವಿದ್ಯುತ್ ಒಲೆಯಲ್ಲಿ ಆತನನ್ನು ಬೂದಿ ಮಾಡಲಾಯ್ತೆಂದು ತಿಳಿದುಬಂತು .
ಇವೇಲ್ಲಾ ನಡೆದು ವಾರವೇ ಕಳೆದರು ಪೋಲೀಸಿನವರಿಂದ ನನಗೆ ಯಾವುದೇ ರೀತಿಯ ಕರೆಯಾಗಲಿ ಇನ್ನಿತರದ್ದಾಗಲಿ ಬರಲಿಲ್ಲ . ಠಾಣೆಯಿಂದ ಒಂದೇ ದಿನದಲ್ಲಿ ವಾಪಾಸ್ ಬಂದಿದ್ದನ್ನು ಕಂಡ ಊರಿನ ಜನರು ಕೂಡ ನನ್ನ ಮೇಲಿದ್ದ ಅನುಮಾನವೆಲ್ಲ ಮರೆತು ಸಾಮಾನ್ಯವಾಗಿ ವರ್ತಿಸುವುದನ್ನು ಕಂಡು ನನಗು ಸಮಾಧಾನವಾಯಿತು . ಈ ನಿರಾಳತೆಯಲ್ಲೇ ಲಗೇಜ್ ಹಿಡಿದು ಬೆಂಗಳೂರು ಬಸ್ ಹತ್ತಿಬಿಟ್ಟೆ .
ಮೈಲಾರಿಯೆಂಬ ಬಡಪಾಯಿ ,ನಮ್ಮೂರಿನಲ್ಲಿ ಸದ್ಯದ ತಲೆಮಾರುಗಳಿಗೆ ನೆನಪಿರುವಂತೆ ಭೀಕರವಾಗಿ ಕೊಲೆಯಾದ ಮೊದಲ ವ್ಯಕ್ತಿ ... ಸಾವಿನ ನಂತರ ತಿಥಿ ,ವೈದಿಕಗಳಂತ ಶಾಸ್ತ್ರವನ್ನು ಕಾಣಲೇ ಇಲ್ಲ ಆ ಆತ್ಮ . ಇದ್ದೊಬ್ಬ ಸಹೋದರ ಕೂಡ "ಅಂವ ನನ್ ಪಾಲಿಗೆ ಯಾವತ್ತೋ ಸತ್ತೋಗ್ಯಾನೆ " ಎಂದು ಹೇಳಿದ್ದ ಮೈಲಾರಿಯ ಸಾವಿನ ವಿಚಾರ ತಿಳಿದು . ಮೈಲಾರಿಯ ಗುಡಿಸಲು ಮನುಷ್ಯರ ಸುಳಿವಿಲ್ಲದೆ ಅವಶೇಷವಾಗಿ ಹೋಗಿತ್ತು ... ಗೋಡೆ ಚಪ್ಪರವೆಲ್ಲ ಉದುರಿ ಕೇವಲ ಅಡಿಪಾಯದ ಕುರುಹುಗಳು ಮಾತ್ರ ಕಾಣಸಿಗುತ್ತವೆ ... ಮನೆಯಲ್ಲಿದ್ದ ಒಂದೆರಡು ಪಾತ್ರೆಗಳು ಹೊರಊರುಳಿ ಮಳೆಯ ನೀರಲ್ಲಿ ತೇಲಿ ಕಂಠದವರೆಗೆ ಮಣ್ಣಲ್ಲಿ ಹುಗಿದು ನಿಂತಿರುವುದು ಹತ್ತಿರದಿಂದ ನೋಡಿದವರಿಗೆ ಕಾಣುತ್ತದೆ . ಮನೆಯ ಒಳಭಾಗದಲ್ಲಿ ಕಾಡು ಗಿಡಗಳು ಬೆಳೆದು ಕೆಲವಷ್ಟು ಪಕ್ಷಿ ಹಾಗು ಮೊಲಗಳಿಗೆ ವಾಸಸ್ಥಾನವಾಗಿದೆ ,.ಅದರ ನಡುವೆ ಕೆದಕಿ ನೋಡಿದರೆ ಸಿಗುವ ಮಣ್ಣಾಗಿರುವ ಕನ್ನಡಿಯ ತುಂಡು , ತುಕ್ಕು ಬಿದ್ದಿರುವ ಮೊಳೆಗಳು , ತಗಡಿನ ಸೌಟುಗಳು ,ದೇವರ ಫೋಟೋ ಕಳೆದುಕೊಂಡ ಫೋಟೋ ಫ್ರೇಮ್ಗಳು ಕೇವಲ ಮನುಷ್ಯನೊಬ್ಬನ ಅಸ್ತಿತ್ವದ ಇತಿಹಾಸವನ್ನಷ್ಟೇ ತಿಳಿಸುತ್ತವೆ . ಮೈಲಾರಿಯ ಮನೆ, ಮನೆಯ ಹತ್ತಿರದ ಜಾಗ ಮತ್ತು ಆತ ಕೊಲೆಯಾದ ಜಾಗ ಊರಿನವರಿಗೆಲ್ಲ ಹತ್ತಿರ ಸುಳಿಯಲು ನಿಷಿದ್ಧವಾಗಿ ಹೋಗಿದೆ . ಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯೂ ಬದಲಾಗಿ ಹೋಯ್ತು , ಇದಕ್ಕೆ ಕಾರಣವೆಂದರೆ , 'ಮೈಲಾರಿ ದೆವ್ವವಾಗಿ ಓಡಾಡುತ್ತಿದ್ದಾನೆ , ಮದುವೆ ಮುಂಜಿ ಇಲ್ಲದೆ ಸತ್ತವನು , ಆತನಿಗೆ ಮುಕ್ತಿಯಿಲ್ಲ ,' ಎನ್ನುವುದು. ಇವಿಷ್ಟೇ ಅಲ್ಲದೆ ' ನಿನ್ನೆ ಮೈಲಾರಿ ಮನೆ ಜಾಗದಲ್ಲಿ ಯಾರೋ ಗಂಡಸು ಅಳುವಂತೆ ಕೇಳುತ್ತಿತ್ತು , ಮೈಲಾರಿ ಸತ್ತ ಜಾಗದಲ್ಲಿ ಯಾರೋ ಕುಳಿತು ಮಾತನಾಡುತ್ತಿರುತ್ತಾರೆ ಸಂಜೆ ಹೊತ್ತಿಗೆ , ರಾತ್ರಿ ಅಂತೂ ಅಲ್ಲಿ ಯಾರೋ ಬಿಳಿ ಬಟ್ಟೆಯಲ್ಲಿ ನಿತ್ತಂತೆ ಕಾಣುತ್ತದೆ , ಅಲ್ಲಿ ಹೋಗುವಾಗ ಯಾರೋ ಹಿಂದೆ ಬರುತ್ತಿದ್ದಾರೆ ಎನಿಸುತ್ತದೆ, ಯಾರೋ ಕರೆಯುತ್ತಾರೆ ಹಿಂದಿನಿಂದ ' ಎಂಬೆಲ್ಲ ವದಂತಿಗಳು ಊರ ತುಂಬಾ ಹಬ್ಬಿದ್ದವು .
ಮೈಲಾರಿ ಎಂಬ ಬಡಜೀವ ಬದುಕಿದ್ದಾಗಿನಕ್ಕಿಂತ ಸತ್ತ ಮೇಲೆಯೇ ಊರಿನವರಿಗೆ ಹೆಚ್ಚು ತಲೆನೋವಾಗಿ ಹೋದ .
* * *
ಇಂದು ನಾನು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದೇನೆ . ಮೈಲಾರಿಯ ಸಾವು ಆಗಾಗ ನನ್ನನ್ನು ಬಡಿದೆಬ್ಬಿಸುತ್ತದೆ. ಆವತ್ತು ಬೆಂಗಳೂರಿಗೆ ಬಂದಿಳಿದವನು ಈವತ್ತಿನವರೆಗೂ ಊರಿನೆಡೆ ಮುಖ ಮಾಡಿಲ್ಲ .
ಮೈಲಾರಿಯ ಕೊಲೆಯ ಪ್ರಕರಣ ಕೊನೆಗೂ ಪೋಲೀಸಿನವರ ಅಸಡ್ಡೆಯಿಂದಲೋ , ಸಾಕ್ಷಿಗಳ ಕೊರತೆಯಿಂದಲೋ , ಕೊಲೆಗಾರನ ಚಾಣಾಕ್ಷತನದಿಂದಲೋ ಎಂಬಂತೆ ಅಂತ್ಯಗೊಂಡು ... ಪ್ರಕರಣದ ಫೈಲ್ ದೂಳು ತಿನ್ನುತ್ತಾ ಮೂಲೆಗೆ ಬಿದ್ದಿತ್ತು . ಕೊಲೆಗಾರ ಕೊನೆಗೂ ಪತ್ತೆಯಾಗಲಿಲ್ಲ .
ಒಂದು ವೇಳೆ ಆ ಕೊಲೆಗಾರ ಸಿಕ್ಕಿದ್ದಿದ್ದರೆ ಇಂದು ಈ ಕಥೆಯನ್ನು ನಾನು ಜೈಲಿನಲ್ಲಿ ಕುಳಿತು ಬರೆಯಬೇಕಾಗುತ್ತಿತ್ತೇನೋ ....!!!?
✍️ಸಚಿನ್ ಶೃಂಗೇರಿ
Comments
Post a Comment