ಹೆನ್ರಿ ಆಸ್ವಾಲ್ಡ್
"ನಿಮ್ಮಿಂದ ಬಹು ದೊಡ್ಡ ಉಪಕಾರವೇ ಆಯ್ತು ,ಸಮಯಕ್ಕೆ ಸರಿಯಾಗಿ ನೀವು ಬರದಿದ್ದರೆ ಈ ಹೊತ್ತಿಗೆ ನನ್ನ ಕಥೆ ಅದೇನಾಗುತ್ತಿತ್ತೋ ಆ ಯೇಸುವೇ ಬಲ್ಲ .... ಈ ಊರಿಗೆ ಬಸ್ ಇರುವುದನ್ನು ವಿಚಾರಿಸದೆಯೇ ಸೀದಾ ನಡೆದು ಹೊರಟುದಡ್ಡತನ ಮಾಡಿಕೊಂಡೆ" ಎಂದು ಒಂದೇ ಸಮನೆ ಮಾತಾಡುತ್ತಿದ್ದ , ಬೈಕ್ನ ಹಿಂಬಾಗದಲ್ಲಿ ಬೆನ್ನಿಂಗೊಂದು , ಎರಡು ಕೈಗಳಲ್ಲೂ ಎರೆಡೆರಡು ಕಪ್ಪು ಬಣ್ಣದ ವಿಚಿತ್ರಾಕಾರದ ಬ್ಯಾಗ್ ಗಳನ್ನೂ ಹಿಡಿದು ಕುಳಿತಿದ್ದ ,ಕೆಂಪನೆಯ ಬಣ್ಣದ ಆರಡಿಎತ್ತರದ ಆ ವ್ಯಕ್ತಿ.
"ಅಯ್ಯೋ , ಅದರಲ್ಲಿ ಉಪಕಾರ ಏನು ಬಂತು ಬಿಡಿ. ಯಾರೋ ನಿಮ್ಮ ಬ್ಯಾಗ್ಗಳನ್ನು ಕಿತ್ತುಕೊಳ್ಳುತ್ತಿರುವುದನ್ನು ನೋಡಿದ ಮೇಲೆಯೂ ಹಾಗೆ ಬರುವುದಕ್ಕೆ ಆಗುತ್ತದೆಯೇ . ವಿಷ್ಯ ಏನೆಂದರೆ ಈ ಊರಿನ ಜನರು ಅಂತವರಲ್ಲ , ಅವರ್ಯಾರುಕೂಡ ಹೀಗೆ ಮಾಡಲು ಸಾಧ್ಯವಿಲ್ಲ. ಪಕ್ಕದ ರಸ್ತೆಯಲ್ಲಿ ಹೊಳೆಯೊಂದಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಅಲ್ಲಿಗೆ ಉತ್ತರ ಭಾರತದ ಒಂದಷ್ಟು ಜನ ಕೆಲಸಕ್ಕೆ ಬಂದು ಇಲ್ಲೇ ಬೀಡು ಬಿಟ್ಟಿದ್ದಾರೆ. ಅವರುಬಂದಮೇಲೆಯೇ , ಶಾಲೆ ಕಾಲೇಜು ಮಕ್ಕಳಿಗೆ ತೊಂದರೆ ಕೊಡುವುದು ,ರಾತ್ರಿ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡೋದು ,ಇನ್ನಿತರ ಕಾರುಬಾರುಗಳು ಜೋರಾಗಿರೋದು, ಬನ್ನಿ ಟೀ ಕುಡಿಯುತ್ತ ಮಾತನಾಡೋಣ, ಇದು ನಮ್ಮಮಾಮೂಲಿ ಕ್ಯಾಂಟೀನ್ " ಎನ್ನುತ್ತಾ ಬೈಕ್ ಓಡಿಡಿಸುತ್ತಿದ್ದ ವ್ಯಕ್ತಿಯು ಬೈಕನ್ನು ಆ ಕ್ಯಾಂಟೀನ್ ಬದಿಗೆ ನಿಲ್ಲಿಸಿ , ಹಿಂದುಗಡೆಯಾ ಆ ವ್ಯಕ್ತಿಯ ಬ್ಯಾಗುಗಳಲ್ಲಿ ಎರಡನ್ನು ತಾನು ಹಿಡಿದುಕೊಂಡು, ಇಬ್ಬರು ಸಹ ಕ್ಯಾಂಟೀನ್ ಒಳಗೆನಡೆದುಬಿಟ್ಟರು.
ಕಂದು ಬಣ್ಣದ, ಸಣ್ಣ ಸಣ್ಣ ತೂತುಗಳ ಬನಿಯನ್
ಧರಿಸಿ, ಮಾಸಲು ಹಿಡಿದಿದ್ದ ನೀಲಿ ಬಣ್ಣದ ಲುಂಗಿಯನ್ನು ಉಟ್ಟಿದ್ದ , ಬೋಳು ತಲೆಯ, ಕ್ಯಾಂಟೀನ್ ನ ಮಾಲೀಕರು-ಹಮಾಲಿಕರು ಆದ ಕೃಷ್ಣಪ್ಪ ಶೆಟ್ಟರು ಇವರಿಬ್ಬರನ್ನು ನಗೆಯ ಮೂಲಕವೇ ಒಳಗೆ ಸ್ವಾಗತಿಸುತ್ತಾ "ಹ ...ಏನ್ ಕೊಡ್ಲಿ , ಏನ್ಸಾರ್ ಬೆಳಿಗ್ಗೆ ಬರ್ಲೆ ಇಲ್ಲ ಇವತ್ತು , ಇವರ್ಯಾರು ಹೊಸಬರು, ನಿಮ್ಮ ನೆಂಟರ ..?" ಎಂದು ಒಂದರ ಮೇಲೊಂದರಂತೆ ಪ್ರಶ್ನೆಯ ಮಳೆಗೈದರು.
"ಇವತ್ತು ಎಕ್ಸಾಮ್ ಡ್ಯೂಟಿ ಇತ್ತು ಅದಕ್ಕೆ ಬರೋಕಾಗ್ಲಿಲ್ಲ ಬೆಳಿಗ್ಗೆ , ಬೇಗ ಹೋಗ್ಬಿಟ್ಟೆ ಶೆಟ್ರೇ , ಇವರು ನೆಂಟರಲ್ಲ , ದಾರಿಯಲ್ಲಿ ಬರುವಾಗ ಜೊತೆ ಸಿಕ್ಕಿದರು. ಹಾಗೆ ಕರ್ಕೊಂಡ್ ಬಂದೆ. ಏನಕ್ಕೆ ಬಂದಿದಾರೆ ಅಂತ ಅವ್ರನ್ನೆ ಕೇಳ್ಬೇಕು" ಎಂದುನಗುತ್ತ ಶೆಟ್ಟರಿಗೆ ಉತ್ತರಿಸಿ, " ಟೀ ಕುಡೀತೀರಲ್ವಾ ..?" ಎಂದು ಆ ವ್ಯಕ್ತಿಯನ್ನು ಕೇಳಿ , ಉತ್ತರಕ್ಕಾಗಿಯೂ ಕಾಯದೆ "ಎರಡು ಟೀ ಕೊಡಿ ಶೆಟ್ರೇ" ಎಂದರು. ಶೆಟ್ಟರು ಆ ವ್ಯಕ್ತಿಯ ಮುಖ ನೋಡಿ ಅಪರಿಚಿತ ನಗೆ ನಕ್ಕು 'ಆಗಲಿ" ಎಂದುಒಳನಡೆದರು.
ದಿಗ್ಮೂಢನಾಗಿ ಕುಳಿತಿದ್ದ ಆ ಆಗಂತುಕ ವ್ಯಕ್ತಿ 'ಕೇವಲ ಏಳೆಂಟು ಕುರ್ಚಿಗಳನ್ನು , ಎರಡು ಮರದ,ಬೆಂಚಿನಂತಹ ಟೇಬಲ್ಗಳನ್ನು , ಸುಣ್ಣ-ಬಣ್ಣವಿಲ್ಲದೆ ಮಸಿಯ ಬಣ್ಣಕ್ಕೆ ತಿರುಗಿದ್ದ ಗೋಡೆಯು ಗಿರಾಕಿಗಳ ಕೊಬ್ಬರಿಎಣ್ಣೆ ಕೂದಲಿನ ತಲೆಗಳಿಗೆಆಧಾರವಾಗಿ ನಿಂತು ಕುರ್ಚಿ ಇದ್ದ ಜಾಗದ ಮೇಲೆಲ್ಲಾ ಗುಂಡನೆಯ ಕಪ್ಪು ಕಪ್ಪಾಗಿ ಹೊಳೆಯುವ ವೃತ್ತಾಕಾರದ ಕುರುಹುಗಳನ್ನು, ಶೆಟ್ಟರ ಗಾಜಿನ ಟೇಬಲ್ಲಿನ,ಮಬ್ಬು ಹಿಡಿದ ಗಲ್ಲಾ ಪೆಟ್ಟಿಗೆಯನ್ನು , ಮತ್ತು ಗಾಜಿನ ಕವಾಟಿನೊಳಗಿದ್ದ , ಬೋಂಡಾಬಜ್ಜಿ ,ಪಕೋಡ ,ಗೋಳಿಬಜೆಯನ್ನು ಮ್ಲಾನವದನನಾಗಿ ವೀಕ್ಷಿಸುತ್ತಾ ಕುಳಿತಿದ್ದಾಗ ,"ಅಂದ ಹಾಗೆ ನಿಮ್ಮ ಪರಿಚಯ ...?" ಎಂಬ ಧ್ವನಿ ಕೇಳಿ , ವಾಸ್ತವಕ್ಕೆ ಬಂದಿಳಿದು....."ನನ್ನ ಹೆಸರು ಹೆನ್ರಿ ಆಸ್ವಾಲ್ಡ್ ಅಂತ, ಈ ಊರಿಗೆ ಮೊದಲ ಬಾರಿಗೆ ಬರುತ್ತಿದ್ದೇನೆ, ನಾನೊಬ್ಬ 'ಹೆರ್ಪೆಟಾಲೊಜಿಸ್ಟ್'.
ಅಂದರೆ 'ಉಭಯಚರ ಮತ್ತು ಸರೀಸೃಪ ' ಜೀವಿಗಳ ಕುರಿತು ಅಧ್ಯಯನ ಮಾಡುವವನು. ಭಾರತದಲ್ಲಿರುವ, ಜಪಾನ್ ನ ಒಂದು ಸಂಸ್ಥೆಗಾಗಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದೇನೆ. ಅದಕ್ಕಾಗಿಯೇಈವಾಗ ಈ ಊರಿಗೆ ಬರುವಂತಾಯ್ತು. ಮೂಲತಃ ನಾನು ಹಾಸನದವನು , ಆದರೆ ತುಂಬಾ ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೇ ಬೆಳೆದೆ.
ಶಾಂಪುರ ದಲ್ಲಿ ಬಸ್ ಇಳಿದು, ಅಲ್ಲೇ ಪಕ್ಕದಲ್ಲಿದ್ದ ಎಟಿಎಂ ನಲ್ಲಿ ಸ್ವಲ್ಪ ಹಣಬಿಡಿಸಿಕೊಂಡು ನಡೆದು ಈಕಡೆ ಹೊರಟೆ ,ಅದನ್ನು ನೋಡಿದ ನಾಲ್ಕು ಜನ ನನ್ನ ಹಿಂದೆ ಬಿದ್ದರು. ಸಮಯಕ್ಕೆ ಸರಿಯಾಗಿ ಬಂದು ನೀವು ಕಾಪಾಡಿದಿರಿ, ಅಂದಹಾಗೆನಿಮ್ಮ ಪರಿಚಯ ..??" ಎಂದು ಕೇಳಿದ ಆಸ್ವಾಲ್ಡ್ ಗೆ
"ಇವರು ಪ್ರೊಫೆಸರ್ ವಿಶ್ವನಾಥ್ ಅಂತ, ಶಾಂಪುರದ ಕಾಲೇಜಿನಲ್ಲಿ ಲಕ್ಚರಿಕೆ ಮಾಡ್ತಾರೆ ....ಹೆ ಹೆ ಹೆ ... ಪಕೋಡ ತಗೋಳಿ ಬಿಸಿ ಬಿಸಿ ಇದೆ " ಎನ್ನುತ್ತಾ ಒಂದು ತಟ್ಟೆಯಲ್ಲಿ ಪಕೋಡ ತುಂಬಿ ತಂದು ಅವರ ಎದುರಿಟ್ಟರು ಕೃಷ್ಣಪ್ಪ ಶೆಟ್ಟರು.ಆಸ್ವಾಲ್ಡ್ ರ ವೃತ್ತಿ, ಅದರ ಪರಿಮಿತಿ, ಅವರಿಗಿದ್ದ ಹೊರದೇಶದ ನಂಟು, ಅವರ ಇಂಗ್ಲಿಷ್ ಮಾತಿನ ವೈಖರಿಯನ್ನು ಕೇಳಿದ ಶೆಟ್ಟರಿಗೆ , ದೇವಲೋಕದ ಕಿನ್ನರನೊಬ್ಬ ಭುವಿಗಿಳಿದು ಅತ್ತಿತ್ತ ನೋಡದೆ ನೇರವಾಗಿ ತಮ್ಮ ಕ್ಯಾಂಟೀನ್ ಗೆ ಬಂದಂತೆಭಾಸವಾಗಿತ್ತು. "ಊಟ ತಿಂಡಿಗೆ ಚಿಂತೆ ಮಾಡ್ಬೇಡಿ , ಇಲ್ಲಿಗೆ ಬನ್ನಿ .ಮನೆಯಲ್ಲಿ ಅಡುಗೆ ಮಾಡೊ ಹಾಗೇನೇ ಮಾಡ್ತೀವಿ , ಹಾಳು-ಮೂಳು ಸೋಡಾ ಪುಡಿ ಎಲ್ಲ ಹಾಕಲ್ಲ ನಾವು " ಎನ್ನುತ್ತಾ ಹೊಸ ಗಿರಾಕಿಯನ್ನು ಗಟ್ಟಿಗೊಳಿಸುವವೃತ್ತಿಧರ್ಮವನ್ನು ಮೆರೆದರು.
" ಕಳೆದ ಹತ್ತು ವರ್ಷಗಳಿಂದ ಇದೆ ಊರಿನಲ್ಲಿ ವಾಸವಿದ್ದೇನೆ, ಮೂಲತಃ ಬಯಲುಸೀಮೆ ಭಾಗದವನು ನಾನು, ಮೊದಮೊದಲು ಇಲ್ಲಿಗೆ ಬಂದಾಗ ಇಲ್ಲಿನ ಮಳೆಗಾಲ, ಜಿಗಣೆ ಕಾಟ , ಆಹಾರ ಪದ್ಧತಿ ರೇಜಿಗೆ ಹುಟ್ಟಿಸಿದ್ದವು ಆದರೆ ದಿನಕಳೆದಂತೆ ಈ ವಾತಾವರಣವೇ ಮುದ ನೀಡೋತೊಡಗಿತು. ಇಲ್ಲಿಯ ಜನ ಜೀವನ ಒಂದು ರೀತಿಯ ಅಪ್ಯಾಯಮಾನವಾದದ್ದು , ತಾರತಮ್ಯವಿಲ್ಲದೆ ಎಲ್ಲರನ್ನು ನಮ್ಮವರಂತೆ ನೋಡುತ್ತಾರೆ, ಬಯ್ದರು ಸಹ ವಿನಯವಾಗಿಯೇ ಬಯ್ಯುತ್ತಾರೆ ,ಅದರಲ್ಲೂ ಶಿಕ್ಷಕರಿಗೆ ಈ ಮಲೆನಾಡ ಜನ ಕೊಡುವ ಗೌರವ ಮತ್ತೆಲ್ಲೂ ನಾ ಕಂಡಿಲ್ಲ.ಈ ಬೆಟ್ಟ ಗುಡ್ಡ ಕಾಡು ಎಷ್ಟು ವಿಶಾಲವೋ ಇಲ್ಲಿಯ ಜನರು ಕೂಡ ಹೃದಯವಂತಿಕೆಯಲ್ಲಿ ಅಷ್ಟೇ ವಿಶಾಲರು. ಹಾಗಾಗಿಯೇ ನಾನು ನನ್ನ ಜೀವನದಕೊನೆಯ ಕ್ಷಣಗಳನ್ನು ಇಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿ ಇಲ್ಲೇ ಹತ್ತಿರದಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ ಮನೆ ಕಟ್ಟಿಸುತ್ತಿದ್ದೇನೆ, ಸಂಪೂರ್ಣ ಸಂಸಾರದ ಜೊತೆಗೆ ಇಲ್ಲೇ ಮಿಕ್ಕ ಜೀವನ ಕಳೆಯುವ ನಿರ್ಧಾರ ಮಾಡಿಯಾಗಿದೆ" ಎಂದರುಪ್ರೊ. ವಿಶ್ವನಾಥ್ .
"ನೀವು ಸಿಕ್ಕಿದು ನನ್ನ ಅದೃಷ್ಟವೇ ಸರಿ , ಹೊಲಸು ನಗರ ಜೀವನವನ್ನು ನಂಬಿಕೊಂಡು ,ಮಾನವನ ಮೂಲಭೂತ ಬದುಕನ್ನು ಯಾಂತ್ರಿಕವಾಗಿಸಿಕೊಂಡು, ಅನಿವಾರ್ಯತೆಗಳನ್ನು ಮುಚ್ಚಿಟ್ಟು , ಆ ಅನಿವಾರ್ಯತೆಗಳನ್ನೇ ಸಾಧನೆಗಳಂತೆಬಿಂಬಿಸಿ, ಜೀವವೊಂದರ ಮೂಲತತ್ವವಾದ ಪರಿಸರವನ್ನು ಕೇವಲ ಪ್ರವಾಸಕ್ಕೆ , ಫೋಟೋಗ್ರಫಿಗೆ , ನಾಲ್ಕು ದಿನದ ರಜೆಯಲ್ಲಿ ಕುಡಿದು ತೇಲುವುದಕ್ಕೆ,ಪರಿಸರವೆಂದರೆ ಕೇವಲ ಮನರಂಜನೆಯ ತಾಣವೆಂದು ತಿಳಿದು ವೇಶ್ಯೆಯಂತೆಪರಿಗಣಿಸುವ ಇಂದಿನ ಸಮಾಜದಲ್ಲಿ ನಿಮ್ಮಂತಹ ಜನರಿರುವುದು ಹೆಮ್ಮೆಯ ವಿಷಯ ಅಷ್ಟೇ ಅಲ್ಲದೆ , ನಿಮ್ಮಿಂದ ನನ್ನ ಕೆಲಸಗಳಿಗೂ ತುಂಬಾ ಸಹಾಯ ದೊರಕುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ" ಎಂದು
ಆಸ್ವಾಲ್ಡ್ ರು "ನನಗೆ ಈ ಊರಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕಿತ್ತು , ಸುಮಾರು ಒಂದು ತಿಂಗಳ ಮಟ್ಟಿಗೆ"ಎನ್ನುತ್ತಾ ಸಹಾಯಯೊಂದನ್ನು ಯಾಚಿಸಿದರು.
ಅದಕ್ಕೆ ವಿಶ್ವನಾಥರು "ಒಂದು ತಿಂಗಳೇ ...? ಕೇವಲ ಒಂದು ತಿಂಗಳಿಗೆ ಬಾಡಿಗೆ ಮನೆ ಸಿಗೋದು ಕಷ್ಟ , ಶಾಂಪುರದಲ್ಲಿಲಾಡ್ಜ್ ಸಿಗ್ತಾವೆ ಆದರೆ ತುಂಬಾ ದುಬಾರಿಯಾದೀತು.... ಈ ಊರಿನಲ್ಲಿ ಒಂದು ತಿಂಗಳಿನ ಕಾರ್ಯ ಏನಿದೆ ನಿಮಗೆ ...?ಎಂದು ಕೇಳಿದರು.
ಉತ್ತರವಾಗಿ ಹೆನ್ರಿ ಆಸ್ವಾಲ್ಡ್ "ನನ್ನ ವೃತ್ತಿಯ ಬಗೆಗೆ ಆಗಲೇ ಹೇಳಿದೆನಲ್ಲ...!!, ಅಂತರಾಷ್ಟ್ರೀಯ ಮಟ್ಟದಲ್ಲಿ 'ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್'(ಐಯುಸಿಏನ್) ಎಂಬ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಭಾರತದ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಕುರಿತು ಹೆಚ್ಚಿನ ಕಾಳಜಿಯನ್ನು ತೋರುತ್ತಿದೆ ಮತ್ತು ಈಕುರಿತು ತುಂಬಾ ದೊಡ್ಡ ಮೊತ್ತದ ಬಂಡವಾಳವನ್ನು ವಿನಿಯೋಗಿಸಿಸಂಶೋಧನೆ ನಡೆಸುತ್ತಿದೆ. ಸರಿಸುಮಾರು 1,40,000 ಚದರ ವಿಸ್ತೀರ್ಣದ ಈ ಪಶ್ಚಿಮಘಟ್ಟ ಜಗತ್ತಿನ ಹಲವಾರು ಪ್ರದೇಶಗಳ ವಾತಾವರಣ, ಜನಜೀವನದ ಮೇಲೆ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ ಎನ್ನುವುದು ವಿಶೇಷ. ಈಸಂದರ್ಭದಲ್ಲಿ ಈ ಪರಿಸರದ ಹಲವಾರು ಜೀವವೈವಿದ್ಯಗಳ ಕುರಿತು ಜಗತ್ತಿಗೆ ಇನ್ನು ತಿಳಿದಿಲ್ಲ.ಈ ಕುರಿತು ಎಷ್ಟೇ ಮಾಹಿತಿ ಕಲೆ ಹಾಕಿದರೂ ಕಡಿಮೆಯೇ. ಸಾವಿರಾರು ತಂಡಗಳು ಈ ಕುರಿತು ಅಧ್ಯಯನದಲ್ಲಿ ತೊಡಗಿದ್ದಾವೆ.ಒಟ್ಟಿನಲ್ಲಿ ಈಸಂಶೋಧನೆಯ ಮಹಾಸಾಗರದಲ್ಲಿ ನಾನೊಬ್ಬ ಒಂದು ಹನಿಯ ರೀತಿಯಲ್ಲಿ ಕಾಳಿಂಗ ಸರ್ಪ ಗಳ ಕುರಿತು ಅಧ್ಯಯನ ನಡೆಸಿ ಐಯುಸಿಎನ್ ನ ಒಂದು ಭಾಗವಾದ ಭಾರತದ ನಮ್ಮ ಸಂಸ್ಥೆಗೆ ವರದಿ ಸಿದ್ಧಪಡಿಸಲು ಇಲ್ಲಿಗೆ ಬಂದಿದ್ದೇನೆ"ಎಂದರು ನಗುತ್ತ.
ಆಸ್ವಾಲ್ಡ್ ರ ಮಾತುಗಳನ್ನು ಕೇಳಿ ಪುಳಕಿತಗೊಂಡ ವಿಶ್ವನಾಥರು "ಛೇ.... ಎಂತಹ ದುರಾದೃಷ್ಟ ನೋಡ್ರಿ ನಮ್ಮದು, ಪ್ರಪಂಚವೇ ನಮ್ಮೆಡೆಗೆ ಬೆಕ್ಕಸಬೆರಗಾಗಿ ನೋಡುತ್ತಿರಬೇಕಾದರೆ, ಇಲ್ಲಿರುವ ನಮಗೆ ಇಲ್ಲಿನ ಮಹತ್ವ ಗೊತ್ತಿಲ್ಲ. ದೀಪದಬುಡದಲ್ಲಿ ಕತ್ತಲು ಎನ್ನುವ ಹಾಗೆ. ಇಲ್ಲಿನ ಯುವಕರೋ .... ಅಲ್ಪ ಸ್ವಲ್ಪ ಓದಿದ ತಪ್ಪಿಗೆ ಉದ್ಯೋಗ ಅರಸಿ ನಗರ ಸೇರಿಕೊಂಡು ಮಲೆನಾಡನ್ನು ವೃದ್ಧಾಶ್ರಮ ಮಾಡುತ್ತಿದ್ದಾರೆ.ಯೋಚಿಸಿದರೆ ಸಂಕಟವಾಗುತ್ತೆ. ಒಟ್ಟಿನಲ್ಲಿ ಈ ಸಮಯಕ್ಕೆ ನೀವುಸಿಕ್ಕಿದ್ದು ನನ್ನ ಅದೃಷ್ಟವೇ ಹೌದು, ಇನ್ನೆರಡು ತಿಂಗಳು ರಜೆ ನನಗೆ. ಈವರ್ಷದ ಬೇಸಿಗೆ ರಜೆಗೆ ಒಂದು ಅರ್ಥ ಬಂತು ನೋಡಿ. ನಿಮಗೆ ಅಭ್ಯಂತರ ಇಲ್ಲವೆಂದರೆ ನಾನು ಕೂಡ ಈ ಕಾರ್ಯದಲ್ಲಿ ನಿಮ್ಮೊಡನೆ ಸೇರಿಕೊಳ್ಳುತ್ತೇನೆ. ಉಳಿದುಕೊಳ್ಳುವವ್ಯವಸ್ಥೆಗೆ ತಲೆ ಕೆಡಿಸಿಕೊಳ್ಳಬೇಡಿ, ಈವತ್ತು ನನ್ನ ಮನೆಯಲ್ಲೇ ಇರಿ. ನಾಳೆ ಸಂಜೆಯೊಳಗೆ ವ್ಯವಸ್ಥೆ ಮಾಡುತ್ತೇನೆ ಉಳಿದಿದ್ದನ್ನೆಲ್ಲ. ಆದರೂ ನೀವು ಎಲ್ಲ ಬಿಟ್ಟು ಆ ಕಾಳಿಂಗಸರ್ಪಕ್ಕೆ ಕೈ ಹಾಕಿದ್ದೀರಲ್ಲ, ನನಗೆ ಹಾವುಗಳೆಂದರೆ ಇನ್ನಿಲ್ಲದ ಭಯ"ಎಂದು ಆತಂಕ ವ್ಯಕ್ತಪಡಿಸಿಸುತ್ತ " ಶೆಟ್ರೇ ಲೆಕ್ಕಕ್ಕೆ ಬರೆದುಕೊಳ್ಳಿ " ಎನ್ನುತ್ತಾ ಬನ್ನಿ ಹೊರಡೋಣ ಎಂದು ಆಸ್ವಾಲ್ಡ್ ರೊಡನೆ ಹೊರಟರು.
ಒಳಗೆ ಪಾತ್ರೆ ತೊಳೆಯುತ್ತಿದ್ದ ಶೆಟ್ಟರು ನಗುಮುಖದಿಂದ ಇಬ್ಬರನ್ನು ಬೀಳ್ಕೊಟ್ಟು ಬೈಕ್ ಕಣ್ಮರೆಯಾಗುವವರೆಗೂ ನೋಡುತ್ತಾ ನಿಂತರು, ಹೆಗಲಮೇಲಿದ್ದ ಟವೆಲ್ನಿಂದ ಕೈ ಒರೆಸಿಕೊಳ್ಳುತ್ತ .
ಶಾಂಪುರ, ಹನ್ನೆರಡು ಗ್ರಾಮ ಪಂಚಾಯತಿಯನ್ನು ಹೊಂದಿರುವ ತಾಲೂಕು. ಪರಿಪೂರ್ಣ ಮಲೆನಾಡು. ಅಡಿಕೆ , ಭತ್ತ ,ಕಾಳುಮೆಣಸು,ಏಲಕ್ಕಿ ಯಂತಹ ಬೆಳೆಗಳೊಂದಿಗೆ ಇನ್ನಿತರ ಅರಣ್ಯ ಉತ್ಪನ್ನಗಳನ್ನು ನಂಬಿ ಆರಕ್ಕೂ ಏರದ ಮೂರಕ್ಕೆಇಳಿಯದ ಕೇವಲ ಸಮಯ ಸಂದರ್ಭ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಬದುಕುವ ಜನರ ಪ್ರದೇಶ. ಊರಿಗೊಂದು ಮನೆ ಮನೆಗೊಂದು ಊರು ಎನ್ನುವಂತಹ ಚಿಕ್ಕ ಚಿಕ್ಕ ಊರುಗಳು, ಅಡಿಕೆ ತೋಟದ ಮದ್ಯೆ ಕಾಣುವ ಹೆಂಚಿನ ಮನೆಗಳು,ಪ್ರತಿ ಮನೆಯ ಹತ್ತಿರವೂ ಸಾಮಾನ್ಯವಾಗಿ ಕಾಣುವ ಚಿಕ್ಕ ಪುಟ್ಟ ಹಳ್ಳ ಹೋಳೆ ಕಾಲುವೆ ತೋಡುಗಳು.ನಾಲ್ಕೈದು ಊರಿಗೆ ನೆಪ ಮಾತ್ರಕ್ಕೆ ಎನ್ನುವಂತಹ ಒಬ್ಬ ಶ್ರೀಮಂತ. ಹೆಸರಿಗೆ ಶ್ರೀಮಂತನಾದರೂ ಕಷ್ಟ ಎಂಬ ವಿಷ್ಯದಲ್ಲಿ ಯಾವಬಡವನಿಗೂ ಬಿಟ್ಟು ಕೊಡುವ ಮಟ್ಟಿಗಿಲ್ಲ ಆತ.
ಶಾಂಪುರದಿಂದ ಉಡುಪಿಗೆ ಹೋಗುವ ರಸ್ತೆಯಲ್ಲಿ ಹೊರಟು ಹತ್ತು ಮೈಲಿಯ ನಂತರ ಬಲಕ್ಕೆ ತಿರುಗುವ ರಸ್ತೆ ಮಳೂರಿನೆಡೆಗೆ ಸಾಗುತ್ತದೆ. ಮುಖ್ಯ ರಸ್ತೆಯಿಂದ ಈ ಮಳೂರಿಗೆ ಸಾರಿಗೆ ವ್ಯವಸ್ಥೆ ಎಂದರೆ ಬೆಳಗ್ಗೆ ಎಂಟಕ್ಕೆ ಮತ್ತು ಸಂಜೆ ಐದಕ್ಕೆಬರುವ ದಾಹೂದ್ ಸಾಬರ 'ದಾಹೂದ್ ಮೋಟಾರ್ಸ್' ಹೆಸರಿನ ಬಸ್ಸು. ಇದಿಲ್ಲದೆ ಹೋದರೆ ಶಾಂಪುರದಿಂದ ಉಡುಪಿಗೆ ಹೋಗುವ ಬಸ್ ಹತ್ತಿ ಹತ್ತು ಮೈಲಿ ಕ್ರಮಿಸಿ ನಂತರ ಮಳೂರಿನ ವರೆಗೆ ಐದು ಮೈಲು ನಡೆದು ಸಾಗಬೇಕು.ಮಾಳೂರು ಒಂದು ಕಿರಿಯ ಮತ್ತೊಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಎರಡು ಕೊಠಡಿಗಳ ಸರಕಾರಿ ಆಸ್ಪತ್ರೆ, ಒಂದು ಗ್ರಾಮೀಣ ಬ್ಯಾಂಕ್, ಎಂಟರಿಂದ ಹತ್ತು ದಿನಸಿ ಅಂಗಡಿಗಳು,ಕೃಷ್ಣಪ್ಪ ಶೆಟ್ಟರ ಕ್ಯಾಂಟೀನ್ ನನ್ನು ಹೊಂದಿದೆ.ಇಲ್ಲಿನಜನ ಜೀವನ ಅತ್ತ ಆಧುನಿಕವು ಅಲ್ಲದ ಇತ್ತ ಸಂಪ್ರದಾಯಿಕವೂ ಅಲ್ಲದ, ಇವೆರಡಕ್ಕೂ ಬೆಸುಗೆಯಾಗಿ ನಿಂತಿರುವ ಕೊಂಡಿಯಂತೆ ಕಾಣುತ್ತದೆ.
ಊರಿನ ಮುಖ್ಯ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದ ರಮೇಶ್ ಗೌಡರು ಅಂಗಡಿಯ ಮೇಲ್ಬಾಗದಲ್ಲಿ ಖಾಲಿ ಇದ್ದ ಮಾಳಿಗೆ ಮನೆಯನ್ನು ಪ್ರೊ.ವಿಶ್ವನಾಥ್ರವರಿಗೆ ತಿಂಗಳಿಗೆ ಒಂದು ಸಾವಿರದ ಲೆಕ್ಕದಲ್ಲಿ ಬಾಡಿಗೆಗೆ ಕೊಟ್ಟಿದ್ದರು, ಕಾಲೇಜಿಗೆಹೋಗುತ್ತಿರುವ ತಮ್ಮ ಮಗ ಪ್ರೀತಮ್ ಗು ಕೂಡ ಓದಿನ ವಿಚಾರದಲ್ಲಿ ಸ್ವಲ್ಪ ಸಹಾಯವಾಗುತ್ತದೆ ಎಂದೆಣಿಸಿ. ರಮೇಶ್ ಗೌಡರ ಮಗ ಪ್ರೀತಂ ತನ್ನ ಅಧ್ಯಾಪಕರು ತಮ್ಮ ಮನೆಯ ಬಳಿಯೇ ಇರುವುದರಿಂದ ತನ್ನ ಕುಚೇಷ್ಟೆಗೆಲ್ಲ ಪೂರ್ಣವಿರಾಮ ಹಾಕಿಕೊಂಡು ಪೀಕಲಾಟಕ್ಕೆ ಸಿಲುಕಿ ಕುಳಿತಿದ್ದ.ಮನೆಯಲ್ಲಿ ಅಪ್ಪನ ಹದ್ದಿನ ಕಣ್ಣು ಕಾಲೇಜಿನಲ್ಲಿ ವಿಶ್ವನಾಥರ ಕಣ್ಣು ....ಕಾಲೇಜಿಗೆ ಹೋಗಿ ಬರುವುದು ಸಹ ವಿಶ್ವನಾಥರ ಜೊತೆಯಲ್ಲೇ. ಒಟ್ಟಿನಲ್ಲಿ ಬಂಗಾರದ ಬದುಕಾಗಬೇಕಿದ್ದಪ್ರೀತಂನ ಹರೆಯದ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಿತ್ತು ನೋಡುವವರ ದೃಷ್ಟಿಯಲ್ಲಿ .
ವಿಧ ವಿಧವಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು, ಬಗೆ ಬಗೆಯ ಕ್ಯಾಮೆರಾ ಗಳನ್ನೂ ,ಕ್ಯಾಮೆರಾ ಲೆನ್ಸ್ ಮತ್ತು ಸ್ಟ್ಯಾಂಡ್ಗಳನ್ನು ಸುತ್ತಲೂ ಹರಡಿಕೊಂಡು ಪರೀಕ್ಷಿಸುತ್ತಾ ಒನ್ದನ್ನೊಂದಕ್ಕೆ ಜೋಡಿಸಿ ತೆಗೆಯುತ್ತಾ ಏಕಾಗ್ರವಾಗಿ ಕುಳಿತಿದ್ದ ಹೆನ್ರಿಆಸ್ವಾಲ್ಡ್ ರನ್ನು ಗಮನಿಸುತ್ತಿದ್ದ ವಿಶ್ವನಾಥರೆಡೆಗೆ ನೋಡಿ ಆಸ್ವಾಲ್ಡ್ "ನಿಮಗೇನು ಅಭ್ಯಂತರ ಇಲ್ಲವೆಂದರೆ ಒಂದು ತಿಂಗಳ ಮಟ್ಟಿಗೆ ಇಲ್ಲಿಯೇ ಇರಬಹುದೇ" ಎಂದು ಕೇಳಿದೊಡನೆಯೇ "ಅದೊಂದು ಸಾಧ್ಯವಿಲ್ಲ, ನನಗೇನು ತೊಂದರೆ ಇಲ್ಲ,ಆದರೆ ಈ ಮನೆ ಮಾಲೀಕರು ಖಂಡಿತ ಒಪ್ಪುವುದಿಲ್ಲ.ನಾನು ಉಪನ್ಯಾಸಕ ಎನ್ನುವ ಒಂದೇ ಕಾರಣಕ್ಕೆ ಬಾಡಿಗೆ ಮನೆ ಕೊಟ್ಟಿದ್ದಾರೆಯೇ ಹೊರತು ಮತ್ಯಾರಿಗೂ ಕೊಡುವವರಲ್ಲ. ಪಕ್ಕದಲ್ಲೇ ಇವರ ಇನ್ನೊಂದು ಮನೆಯು ಖಾಲಿ ಬಿದ್ದಿದೆ,ಅದನ್ನು ಯಾರಿಗೂ ಕೊಡಲು ಸಿದ್ದರಿಲ್ಲ. ನೀವೇನು ಚಿಂತಿಸಬೇಡಿ, ನಾಳೆ ನಾನೇ ಎಲ್ಲ ವ್ಯವಸ್ಥೆ ಮಾಡಿಸುತ್ತೇನೆ" ಎಂದರು ಪ್ರೊ.ವಿಶ್ವನಾಥ್.
ಮರುದಿನ ಬೆಳಿಗ್ಗೆ ಎಚ್ಚರಗೊಂಡ ಹೆನ್ರಿ ಆಸ್ವಾಲ್ಡ್ ರಿಗೆ ಪಕ್ಕದಲ್ಲಿ ಮಲಗಿದ್ದ ವಿಶ್ವನಾಥ್ ಇಲ್ಲದಿರುವುದನ್ನು ಕಂಡು "ಎಲ್ಲಿ ಹೋದರು ಈ ಆಸಾಮಿ ಈ ಬೆಳಿಗ್ಗೆಯೇ" ಎಂದುಕೊಳ್ಳುತ್ತ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ ಒಂದಷ್ಟು ಗುಪ್ತ ಫೈಲ್ಗಳನ್ನೂಹೊರತೆಗೆದು ತಿರುವು ಹಾಕಿ ಮತ್ತೆ ಅವನ್ನೆಲ್ಲ ವಾಪಾಸ್ ಒಳಗಿಟ್ಟು ಹೊರಗಿನ ಸುಳಿಬಿಸಿಲನ್ನು ಕಂಡು ಮಹಡಿಯ ಛಾವಣಿ ಬಳಿ ಹೋಗಿ ನಿಂತು ಬಿಸಿಲು ಕಾಯಿಸುತ್ತಾ ಚಾವಣಿಯ ಕೆಳಗೆ ವೀಕ್ಷಿಸುತ್ತ ನಿಂತರು.
ಕೆಳಗೆ ನಿಂತಿದ್ದ ಸರಿ ಸುಮಾರು ಹತ್ತೊಂಬತ್ತರಿಂದ ಇಪ್ಪತ್ತೊಂದರ ಪ್ರಾಯದ ಯುವಕನೊಬ್ಬ ಆಸ್ವಾಲ್ಡ್ ರ ಗಮನ ಸೆಳೆದ.ಆತನನ್ನೇ ದಿಟ್ಟಿಸುತ್ತಾ ನಿಂತರು ಆಸ್ವಾಲ್ಡ್.
ಮೈಮೇಲೆ ಒಳ್ಳೆಯ ಬಟ್ಟೆಯನ್ನೇನೋ ಧರಿಸಿದ್ದಾನೆ, ಕೂದಲು ಕೆದರಿಕೊಂಡಿದ್ದಾನೆ, ಪದೇ ಪದೇ ತಲೆಗೆ ಕೈ ಹಾಕಿ ಕೆರೆದುಕೊಳ್ಳುತ್ತಾ ,ಕೈಯನ್ನು ನೆಲದೆಡೆಗೆ ಸಿಡಿಯುತ್ತ ಹತಾಶನಂತೆ ವರ್ತಿಸುತ್ತಿದ್ದಾನೆ. ಬಾಯಿ ಒಣಗಿದವರಂತೆ ಉಗುಳುನುಂಗುತ್ತಾನೆ, ಕೈಕಾಲುಗಳು ಆತನ ಸ್ಥಿಮಿತದಲ್ಲಿ ಇಲ್ಲದೆ ಸಣ್ಣಗೆ ನಡುಗುವಂತೆ ಅನಿಸುತ್ತಿದೆ. ಆತನ ಬಳಿ ಮಾತನಾಡುವವರಿಗೆ , ಏನೋ ಯೋಚನೆ ಮಾಡುತ್ತಿರುವವನು ತಟ್ಟನೆ ಏನೋ ಹೊಳೆದಂತೆ ಪ್ರತಿಕ್ರಿಯಿಸುವ ರೀತಿಯಲ್ಲಿಮಾತಾಡುತ್ತಾನೆ. ಕಣ್ಣುಗಳು ಕೆಂಪಾಗಿ ರಕ್ತ ಚಿಮ್ಮುತ್ತಿವೆ. ಒಂದು ರೀತಿಯಲ್ಲಿ ವ್ಯಸನಿಯಂತೆ ಕಂಡ ಆ ಯುವಕನ ಬಗ್ಗೆ ವಿಶ್ವನಾಥ್ ಬಳಿಯೇ ಕೇಳಿ ತಿಳಿಯೋಣವೆಂದು ಮನೆಯ ಒಳಬಂದು ಕುಳಿತರು ಆಸ್ವಾಲ್ಡ್.
“ನೀವು ನಿದ್ದೆಯಲ್ಲಿದ್ರಿ ,ತೊಂದರೆ ಕೊಡೋದು ಬೇಡ ಅಂತ ಏಳಿಸಲಿಲ್ಲ ,ಪಕ್ಕದ ಊರೊಂದಕ್ಕೆ ಹೋಗಿ ಬಂದೆ ಒಳ್ಳೆ ವಿಚಾರ ಏನೆಂದರೆ, ನಿಮಗೆ ಉಳಿದುಕೊಳ್ಳೋಕೆ ಒಂದು ಒಳ್ಳೆ ಮನೆಯ ವ್ಯವಸ್ಥೆ ಆಗಿದೆ, ನಿಮ್ಮ ಈ ಸಂಶೋಧನಾಕಾರ್ಯಕ್ಕೆ ಹೇಳಿ ಮಾಡಿಸಿದ ಜಾಗ" ಎಂದು ನೆಮ್ಮದಿಯ ನಗೆ ನಕ್ಕರು ವಿಶ್ವನಾಥರು.
"ಹೊ..... ತುಂಬಾ ಧನ್ಯವಾದಗಳು ಪ್ರೊಫೆಸರ್. ಒಂದು ಬಾರಿ ಹೋಗಿ ನೋಡಿ ಬರೋಣವೇ " ಎಂದು ಕೇಳಿದ ಆಸ್ವಾಲ್ಡ್ ರಿಗೆ, "ನೋಡಿಬರುವ ಮಾತು ಇಲ್ಲ ಸ್ವಾಮಿ, ಆ ಮನೆಯನ್ನು ,ಪರಿಸರವನ್ನು ನೀವು ಒಪ್ಪದೇ ಇರಲಾರಿರಿ. ಅದೂಅಲ್ಲದೆ ಇವತ್ತು ಸಂಜೆಯೊಳಗೆ ನೀವು ಇಲ್ಲಿಂದ ಹೊರಡಲೇಬೇಕು, ಯಾಕೆಂದರೆ ಇವತ್ತು ಬೆಳಿಗ್ಗೆ ಈ ಮನೆ ಮಾಲೀಕರು "ಆ ವಿಶ್ವನಾಥರು ಏನೋ ಸಭ್ಯಸ್ಥರು ಅಂತ ಮನೆ ಕೊಟ್ರೆ ,ಈವಾಗ ನೋಡಿದ್ರೆ ಯಾವನೋ ಕ್ರಿಸ್ತಾನರನ್ನ ಒಳ್ಗೆಸೇರ್ಸ್ಕೊಂಡಿದಾರೆ ,ಜಾತಿಗೆಟ್ಟವನು ...!" ಅಂತ ಮಾತಾಡ್ತಿದ್ರಂತೆ ಬೆಳಿಗ್ಗೆ. ಕೇಳಿಸ್ಕೊಂಡವ್ರ್ ಯಾರೋ ಹೇಳಿದ್ರು.ಅದಕ್ಕೆ ಸಾರ್ ಬೇಗ ಖಾಲಿ ಮಾಡೋದು ಒಳ್ಳೇದು ,ದಯವಿಟ್ಟು ನೀವು ತಪ್ಪಾಗಿ ಭಾವಿಸಬೇಡಿ...... ನಾನು ಊಟಸಿದ್ಧಪಡಿಸುತ್ತೇನೆ, ನೀವು ವಿರಮಿಸಿ" ಎಂದರು."ಸರಿ ನೀವು ಹೇಳಿದ ಹಾಗೆ ಆಗಲಿ, ಸುಮ್ಮನೆ ತೊಂದರೆ ತೆಗೆದುಕೊಳ್ಳೋದು ಬೇಡ" ಎನ್ನುತ್ತಾ ಆಸ್ವಾಲ್ಡ್ ಮತ್ತೊಮ್ಮೆ ಮೇಲ್ಚಾವಣಿ ಕಡೆಗೆ ನಡೆದರು.
ಆ ಹುಡುಗ ಅಲ್ಲೇ ಕುಳಿತಿದ್ದನ್ನು ಕಂಡರು, ಮೊದಲು ಆತನನ್ನು ನೋಡಿದಾಗ ಆತನಲ್ಲಿ ಕಾಣುತ್ತಿದ್ದ ದುಗುಡ ಆತಂಕಗಳು ಈಗ ಕಾಣುತ್ತಿರಲಿಲ್ಲ . ಸ್ವಲ್ಪ ಶಾಂತನಾದಂತೆ ತೋರುತ್ತಿತ್ತು. ನೇರ ದೃಷ್ಟಿ ನೆಟ್ಟು ಕುಳಿತಿದ್ದ. ಕಣ್ಣುಗಳು ಮಾತ್ರಮೊದಲಿಗಿಂತ ಕೆಂಪಡರಿದ್ದವು . ಮುಖದಲ್ಲಿ ಯಾವುದೊ ಒಂದು ಅನೂಹ್ಯವಾದ ಸಂತಸ ಆತನಲ್ಲಿ ಎದ್ದು ಕಾಣುತ್ತಿತ್ತು. ಬ್ಯಾಗ್ ಯಿಂದ ಕ್ಯಾಮೆರಾ ಹೊರತಂದ ಹೆನ್ರಿ ಆಸ್ವಾಲ್ಡ್ ವಿಶ್ವನಾಥರಿಗೆ ತಿಳಿಯದಂತೆ ಆ ಹುಡುಗನ ಫೋಟೋವನ್ನುಕ್ಲಿಕ್ಕಿಸಿಕೊಂಡರು. ತಕ್ಷಣವೇ ಅಡುಗೆ ಮನೆಯಿಂದ ಪಾತ್ರೆ ಕೆಳಗೆ ಬಿದ್ದ ಸದ್ದು ಕೇಳಿ ಬೆಚ್ಚಿಬಿದ್ದ ಆಸ್ವಾಲ್ಡ್ ರು ಏನಾಯ್ತೆಂದು ವಿಶ್ವನಾಥರೆಡೆಗೆ ಕೂಗಿದರು.
"ಏನಿಲ್ಲ ಸಾರ್ , ಗ್ರಾವಿಟೇಷನಲ್ ಫೋರ್ಸ್ ಎಫ್ಫೆಕ್ಟು ... ತಟ್ಟೆ ಕೈ ಜಾರಿ ಬಿತ್ತು " ಎಂದು ನಕ್ಕರು.
* * *
‘ಕಪಟ ನಾಟಕರಂಗ....ಕುಪಿತವೇನೋ ನಿನ್ನಂಗ ,
ನಿಪುಣ ಭೀಮನ ನೋಡೋ ಚಪಲತ್ವದೀಮಾತಾಡೋ ' ಎಂಬ ಯಕ್ಷಗಾನದ ಪದ್ಯವೊಂದಕ್ಕೆ ತೊಡೆ ತಾಳ ಹಾಕುತ್ತ ಕುಳಿತಿದ್ದರು, ಮಳೂರು ಮತ್ತು ಸುತ್ತ -ಮುತ್ತಲ ನಾಲ್ಕೂರಿನ ಹಿರಿಯ ಸಿರಿವಂತ ಕುಟುಂಬದ ಯಜಮಾನ, ಡಬ್ಬಲ್ ಡಿಗ್ರಿಪಧವೀದರ ,ಕ್ಷಿಪ್ರ ಕೋಪಿಷ್ಠರಾದ ಚನ್ನಕೇಶವ ಪಟೇಲರು.
“ಹ್ಹ ಹ್ಹ ಹ್ಹ ...ಬನ್ನಿ ಬನ್ನಿ ವಿಶ್ವನಾಥರೇ ...!! ಹ ಹಾ ನಮಸ್ತೆ ...ನಿಮ್ಮ ಹೆಸರು ಮರೆತುಬಿಟ್ಟೆ , ವಿಶ್ವನಾಥ್ ಎಲ್ಲಾ ಹೇಳಿದ್ದಾರೆ ....ಕ್ರಿಸ್ಟಿಯನರಲ್ಲಿ ಯಾವ ಪಂಗಡ ನಿಮ್ಮದು ...? ಪ್ರೊಟೆಸ್ಟೆಂಟ್ ಅಥವಾ ಕ್ಯಾಥೊಲಿಕ್ ...?” ಎಂದು ಕೇಳುತ್ತಾನಾಲ್ಕಾರು ಬ್ಯಾಗುಗಳನ್ನು ಹೊತ್ತು ಬಂದಿದ್ದ ಪ್ರೊ. ವಿಶ್ವನಾಥ್ ಮತ್ತು ಹೆನ್ರಿ ಓಸ್ವಾಲ್ಡ್ ರನ್ನು ಸ್ವಾಗತಿಸಿದ ಪಟೇಲರಿಗೆ "ನಾನು ಪ್ರೊಟೆಸ್ಟೆಂಟ್ ಕ್ರೈಸ್ತ " ಉತ್ತರಿಸುತ್ತಾ ಜಗಲಿ ಕಟ್ಟೆಯ ಮೇಲೆ ಕುಳಿತು ಮನೆಯನ್ನೆಲ್ಲ ವೀಕ್ಷಿಸಿದರು ಆಸ್ವಾಲ್ಡ್.
ಇದು ಅವರ ಹೆಸರಿಗೆ ತಕ್ಕಂತೆ ಪಟೇಲರ ಮನೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನಿಸಿತು ಆಸ್ವಾಲ್ಡ್ ರಿಗೆ . ಹತ್ತು ಹಲವು ವರ್ಷಗಳ ನೆನಪು ಹೊತ್ತು ನಿಟಾರನೆ ನಿಂತಿರುವ ಕಂದು ವರ್ಣದ,ಕಲಾಕುಸುರಿಯ ಮುಂಡಿಗೆ ಕಂಬಗಳು, ಸತ್ತರುಸಾಯದೆ ಹೊದಿಕೆಯಾಗಿ ನಿಂತ ಮೇಲ್ಚಾವಣಿಯ ಹೊದಿಕೆಗಳು, ಸಮಯಕ್ಕೆ ಸೆಡ್ಡು ಹೊಡೆದು ಇಂದಿನ ಸಮಯವಾಗಿ ತೂಗುತ್ತಿರುವ ಕೀಲಿಕೈ ಗೋಡೆ ಗಡಿಯಾರ, ಅದಾವತ್ತೋ ರುಂಡ ಕಳಚಿ ಇಂದಿಗೂ ಮುಂಡ ಮಾತ್ರವನ್ನುಮೊಳೆಯೊಂದಕ್ಕೆ ಸಿಲುಕಿನಿಂತ ಜಿಂಕೆಯ ಕೊಂಬು, ಅವೆಷ್ಟೋ ಸಾವುಗಳ ಕಂಡು ನಿರಪರಾಧಿ ಕರ್ತೃಗಳಂತೆ ಗೋಡೆಗೆ ತೂಗುಬಿದ್ದ ಒಂಟಿನಳಿಗೆಯ ನಾಡ ಬಂದೂಕುಗಳನ್ನು ಒಂದೇ ಸುತ್ತಿನ ನೋಟದಲ್ಲಿ ನೋಡಿ ಮುಗಿಸಿ, ಬಲಗೈಯನ್ನುಸೆರಗಿಗೆ ಒರೆಸುತ್ತಾ ತಟ್ಟೆಯ ಮೇಲೆ ಕಾಫಿ ತಂದು ಆ ಮಹಿಳೆಗೆ ಧನ್ಯವಾದ ಹೇಳಿ , ಗೋಡೆಯ ಮೇಲೆ ತೂಗುಬಿದ್ದಿದ್ದ ಹಿರಿಯ ಮೃತ ಜೀವಗಳ ನಡುವೆ ಇತ್ತೀಚಿನದು ಎಂಬಂತೆ ಬಣ್ಣದ ಛಾಯಾಗ್ರಾದ ಇನ್ನೂ ಕೂಡ ಗಂಧದ ಹಾರವನ್ನುಹೊತ್ತಿದ್ದ ಫೋಟೋ ಫ್ರೇಮ್ ಒಂದೆಡೆಗೆ ಬೆರಳು ಮಾಡಿ "ಯಾರದು ..?" ಎಂದು ಆಸ್ವಾಲ್ಡ್ ರು ಕೇಳುತ್ತಲೇ,ಕಾಫಿ ತಂದು ಕೊಟ್ಟ ಆ ಹೆಣ್ಣುಜೀವ ಒಳಮನೆಗೆ ಧಾವಿಸುತ್ತಿರುವುದನ್ನು ಕಂಡ ವಿಶ್ವನಾಥರು "ಅವರು ಪಟೇಲರ ತಮ್ಮತೀರಿಕೊಂಡು ಎರಡು ತಿಂಗಳಾಯಿತು" ಎಂದು ಉತ್ತರಿಸಿದರು.
ಒಮ್ಮೆಲೇ ಮನೆಯನ್ನು ತುಂಬಿಕೊಂಡ ಮೌನವನ್ನೆಲ್ಲ ಛೇದಿಸಿದಂತೆ " ನೀವು ಬಂದಿರುವ ಉದ್ದೇಶವೆಲ್ಲ ಗೊತಾಯ್ತು, ವಿಶ್ವನಾಥರು ತಿಳಿಸಿದರು. ಈ ಸಂಶೋಧನೆಗೆ ನಮ್ಮ ಊರನ್ನು ಆಯ್ದುಕೊಂಡಿರುವುದಕ್ಕೆ ನಮಗೆ ಹೆಮ್ಮೆ ಇದೆ.ಒಳ್ಳೆಯದಾಗಲಿ ನಿಮಗೆ. ಅಂದಹಾಗೆ ಮೊದಲೆಲ್ಲ ಮನೆ ಸುತ್ತ ಮುತ್ತಲಲ್ಲಿ ತುಂಬಾ ಸಾರಿ ಈ ಕಾಳಿಂಗಸರ್ಪಗಳು ಕಾಣಸಿಗುತ್ತಿದ್ದವು.ಇತ್ತೀಚಿಗೆ ತುಂಬಾ ಕಡಿಮೆ ನಾನು ಅವುಗಳನ್ನು ನೋಡಿದ್ದು. ನಿಮ್ಮ ಸಹಾಯಕ್ಕೆ ನಮ್ಮ ಮನೆಯಕೆಲಸದಾಳುಗಳನ್ನ ಬೇಕಾದರೆ ಕರೆದುಕೊಳ್ಳಿ ನನ್ನದೇನು ಅಭ್ಯಂತರವಿಲ್ಲ. ಅವರಿಗೆ ಸುತ್ತಮುತ್ತಲಿನ ಕಾಡು ಗುಡ್ಡಗಳ ಪರಿಚಯ ಚನ್ನಾಗಿದೆ. ನೀವು ಹೂ ಎನ್ನುವುದಾದರೆ ನಾಳೆಯೇ ಒಬ್ಬನನ್ನು ಕಳಿಸುತ್ತೇನೆ.ನೀವು ಒಪ್ಪುವುದಾದರೆ ಊಟತಿಂಡಿಯ ವ್ಯವಸ್ಥೆ ನಮ್ಮ ಮನೆಯಲ್ಲೇ ಮಾಡಿಸುತ್ತೇನೆ .ಈಗೊಳ್ಳಿ....ಈ ಕೀ ತೆಗುದುಕೊಳ್ಳಿ ವಿಶ್ವನಾಥ್, ಅವರಿಗೆ ತೋಟದ ಮನೆ ತೋರಿಸಿಬನ್ನಿ ಬಾಡಿಗೆ ವಿಚಾರವೆಲ್ಲ ಹೇಳಿದ್ದೆನಲ್ಲ ನಿಮ್ಮ ಹತ್ತಿರ" ಎನ್ನುತ್ತಾ ತಾಕೀತಿನ ಮಾತನ್ನು ಗಡುಸಾಗಿತಿಳಿಸಿ ತಮ್ಮ ತೋಟದ ಮನೆಯ ಕೀಯನ್ನು ವಿಶ್ವನಾಥರ ಕೈಗಿತ್ತರು ಪಟೇಲರು.
ವಿಶ್ವನಾಥರು ಆಸ್ವಾಲ್ಡ್ ರನ್ನು ಪಟೇಲರ ತೋಟದ ಮನೆಯಲ್ಲಿ ಬಿಟ್ಟು “ಎಲ್ಲಿಗೆ ಹೋಗೋದಿದ್ರೂ ,ಏನೇ ಮಾಡೋದಿದ್ರು ಪಟೇಲರಿಗೆ ಒಂದು ಮಾತು ತಿಳಿಸಿ. ಅಕಸ್ಮಾತ್ ಏನಾದರು ತೊಂದರೆಯಾದಲ್ಲಿ ಸಹಾಯಕ್ಕೆ ಬರುತ್ತಾರೆ. ಈಊರಿನಲ್ಲಿ ಅವರ ಮಾತು ನಡೆಯುತ್ತದೆ. ನಾನೀಗ ಶಾಂಪುರಕ್ಕೆ ಹೋಗೋದಿದೆ,ಹೊರುಡುತ್ತೇನೆ " ಎಂದು ಎಚ್ಚರಿಸುವ ಧಾಟಿಯಲ್ಲಿ ಹೇಳಿ ಆ ಸಂಜೆಯೇ ವಾಪಾಸ್ ಹೊರಟರು.
ಪಟೇಲರ ಮನೆಯಿಂದ ಕೂಗಳತೆ ದೂರದಲ್ಲಿದ್ದ ಈ ತೋಟದ ಮನೆಯಲ್ಲಿ ಆ ದಿನ ರಾತ್ರಿ ಊಟ ಮುಗಿಸಿ ಹಾಸಿಗೆಗೊರಗಿದ ಆಸ್ವಾಲ್ಡ್ ಗೆ ಯಾವ ಪ್ರಯತ್ನಕ್ಕೂ ನಿದ್ದೆ ಹತ್ತದೆ ಕೇವಲ ದೂರದಲ್ಲೆಲ್ಲೋ ಬೊಗಳುವ ನಾಯಿಗಳ ಸದ್ದು,ನಿರಂತರವಾಗಿ ಕಾಡಿನ ಗರ್ಭದಿಂದ ಹೊರಸೂಸುವ ಹಕ್ಕಿ ಜೀರುಂಡೆಗಳ ಕೂಗು, ದೂರದಲ್ಲೆಲ್ಲೋ ನಿರಂತರವಾಗಿ ಹರಿಯುವ ನೀರಿನ ಶಬ್ದಗಳು ಕಿವಿಯೊಳಗೆ ತುಂಬಿಕೊಂಡಿದ್ದರು ಸಹ ಕಣ್ಣೆದುರು ಬರುತ್ತಿದ್ದ ವಿಶ್ವನಾಥರ ವಿಚಿತ್ರ ನಡವಳಿಕೆ,ಮೇಲ್ಚಾವಣಿಯಿಂದ ಕಂಡ ಆ ವಿಚಿತ್ರ ಸ್ವಭಾವದ ಹುಡುಗ, ಏನೋ ಹುದುಗಿಸಿ ಕುಳಿತಂತೆ ಕಾಣುವ ಚನ್ನಕೇಶವ ಪಟೇಲರ ಮನೆ ಮತ್ತು ಮನೆಮಂದಿಯ ನಡವಳಿಕೆಗಳು ಚಿಂತೆಗೀಡು ಮಾಡುತ್ತಿದ್ದವು. ಹೋಲಿಸಿ ನೋಡಿದರೆ ಇವರೆಲ್ಲರೂಒಂದೇ ಸರಪಳಿಯ ಕೊಂಡಿಗಳಂತೆ ಭಾಸವಾಗುತ್ತಿದ್ದರು. ತನಗರಿವಿಲ್ಲದೆ ತಾನು ಯಾವುದೊ ಜಟಿಲತೆಯ ಕೂಪವೊಂದಕ್ಕೆ ದುಮುಕುತ್ತಿದ್ದೆನೋ ? ಎಂಬ ಅನುಮಾನ ಮೂಡಿ ಬಂದರು ಸಹ ಸೂಕ್ಷ್ಮತೆಯ ಇಕ್ಕುಳದಿಂದ ಎನ್ತಹಕೊಂಡಿಯನ್ನಾದರೂ ಕಳಚಬಲ್ಲೆ ಎಂದುಕೊಳ್ಳುತ್ತ ನಕ್ಕುಬಿಟ್ಟರು ಮನಸ್ಸಿನೊಳಗೆ.
ಬೆಳಿಗ್ಗೆ ಏಳರ ಹೊತ್ತಿಗೆ ಎಚ್ಚರಗೊಂಡ ಆಸ್ವಾಲ್ಡ್ ರು ಒಂದೇ ಸಮನೆ ಎದ್ದು ಜಗಲಿಯ ಬಾಗಿಲು ತೆರೆದರು.
ಕಪ್ಪು-ಬಿಳಿ ಮಿಶ್ರಿತ ಗಡ್ಡ ಹೊಂದಿದ,ಕುಳ್ಳ ಗಾತ್ರದ,ಕಾಕಿ ಬಣ್ಣದ ಚೆಡ್ಡಿ ಧರಿಸಿ ಅದರಮೇಲೊಂದು ಲುಂಗಿ ಧರಿಸಿ, ಎಲೆಯಡಿಕೆಯಿಂದಾವೃತವಾಗಿ ಕೆಂಪುಗಟ್ಟಿದ್ದ ದಂತಪಂಕ್ತಿಯ, ಬಲಗಾಲಿನ ಮೇಲೆ ಎಡಗಾಲನ್ನು ಹಾಕಿ ಬಲಗೈ ಹೆಬ್ಬೆರೆಳಿನಿಂದಎಡ ಅಂಗೈನಲ್ಲಿನ ತಂಬಾಕನ್ನು ಉಜ್ಜುತ್ತಿದ್ದ ಆ ವ್ಯಕ್ತಿ ಬಾಗಿಲು ತೆರೆದ ಸದ್ದಿಗೆ ತನ್ನೆಡೆಗೆ ತಿರುಗಿ "ನಿಮ್ಮ್ ಜಾತಿಗೆ ಸೇರಿ ಅಂತ ಬಾಳ ಸಲ ಬಂದು ಕೇಳ್ಕೊಂಡ್ರು ,ಎಷ್ಟೇ ಆದ್ರೂ ನಮ್ಮ ಅಜ್ಜ ಮುತ್ತಜ್ಜ ಕಾಲದಿಂದ ನಂಬ್ಕೊಂಡು ಬಂದಿರೋ ಆ ಚೌಡಿಪಂಜುರ್ಲಿನ ಬಿಟ್ಟ್ ಕೊಡೋಕ್ ಆಗುತ್ತಾ ಅಂತ ನಾನ್ ಸೇರ್ಲಿಲ್ಲ ... ಲಕ್ಷ ಲಕ್ಷ ದುಡ್ಡು ಇವತ್ತ್ ಬರ್ತದೆ ನಾಳೆ ಹೋಗ್ತದೆ ,ನಮ್ಗೆ ಒಟ್ನಲ್ಲಿ ಮಕ್ಳು ಮರಿ ಚನ್ನಾಗಿರ್ಬೇಕು ಅಷ್ಟೇಯಾ " ಎನ್ನುತ್ತಾ ತಂಬಾಕನ್ನು ಬಾಯಿಗೆ ತುಂಬಿಸಿಕೊಂಡು ಹ್ಹಿ ...ಹ್ಹಿ...ಹ್ಹಿ ಎಂದು ಹಲ್ಲು ಕಿರಿಯುತ್ತ ತುಂಬಾ ದಿನಗಳಿಂದ ಆಸ್ವಾಲ್ಡ್ ರ ಪರಿಚಯವಿರುವಂತೆ ಅವರ ಮುಖವನ್ನೇ ನೋಡುತ್ತಾ ನಿಂತ.
ಈ ಅಪರಿಚಿತ ವ್ಯಕ್ತಿಯ ವಿಶೇಷ ಸಂಭೋದನೆಯನ್ನು ಕಂಡ ಆಸ್ವಾಲ್ಡ್ ರು ದಂಗಾಗಿ ನಿಂತರು.ಪೂರ್ವಾಪರವಿಲ್ಲದೆ ಸ್ವಪರಿಚಯ ಮಾಡಿಕೊಳ್ಳದೆ ಸೀದಾ ಸೀದಾ ಜಾತಿಯ ಕುಣಿಕೆಗೆ ಕೈ ಹಾಕಿ, ದೇವರು ಮತ್ತು ಭೂತಗಣಗಳ ಮೇಲೆ ತನಗಿದ್ದಭಯ ಭಕ್ತಿ ಮತ್ತು ತನ್ನ ಹಿಂದು ಮುಂದಲಿನ ತಲೆಮಾರುಗಳ ಬಗೆಗಿನ ಕಾಳಜಿಯನ್ನು ನಿಮ್ಮ ಜಾತಿಯ ಮತಾಂತರಕೋರರು ಸಡಿಲ ಮಾಡಲಾರರು ಎನ್ನುವಂತಿತ್ತು ಆತನ ಸ್ವಗತ.
ನೀವ್ಯಾರೆಂದು ಗೊತ್ತಾಗಲಿಲ್ಲ ಎಂದು ಕೇಳಿಯೇ ಬಿಟ್ಟರು ಆ ಆಗಂತುಕನನ್ನು.
"ನಾನು ಕುಂಜ ಅಂತ, ಪಟೇಲ್ರು ಮನೇಲಿ ಕೆಲ್ಸ ಮಾಡ್ತೀನಿ. ಅದೆಂತದೋ ನೀವು ಕಾಡು ಗುಡ್ಡ ಎಲ್ಲ ತಿರಗಾಡ್ಬೇಕಂತಲ್ಲಾ ಅದಕ್ಕಾಗಿ ದಾರಿ ತೋರ್ಸು ಅಂತ ನಂಗೆ ಹೇಳಿ ಕಳ್ಸಿದ್ರು " ಎನ್ನುತ್ತಾ ಅಸಲೀಯತ್ತನ್ನು ಹೊರಗಿಟ್ಟನು.
"ಹೊ ಹೋ ಸರಿ ....ನಾನಿನ್ನು ಸಿದ್ಧನಾಗಿಲ್ಲ. ಹತ್ತು ಗಂಟೆಯ ಹೊತ್ತಿಗೆ ಬನ್ನಿ . ಒಟ್ಟಿಗೆ ಹೋಗೋಣ" ಎಂದರು ಆಸ್ವಾಲ್ಡ್.
" ಸರಿ ಹಳ್ಳಕ್ಕೆ ಕೂಳೆ ಹಾಕಿಟ್ಟಿದೀನಿ, ನೋಡ್ಕೋ ಬರ್ತೀನಿ.ಸರಿಯಾತದೆ " ಎನ್ನುತ್ತ , ನಾನಾಡುವ ಮಾತು ನಾ ಮಾಡ ಹೊರಟಿರುವ ಕೆಲಸ ಇನ್ನೊಬ್ಬರಿಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಗೋಜಿಗೆ ತೆಗೆದುಕೊಳ್ಳದೆ ತನ್ನಿಷ್ಟದಂತೆಏನೋ ಹೇಳುತ್ತಾ ಎದ್ದು ಹೊರಟ ಕುಂಜ.
ಆಸ್ವಾಲ್ಡ್ರು , ಕುಂಜ ನಡೆದು ಕಣ್ಮರೆಯಾಗುವ ತನಕ ನೋಡುತ್ತಾ ನಿಂತರು. ಮುಂಗಾಲಿನವರೆಗೆ ಖಾಕಿ ಬಣ್ಣದ ಚೆಡ್ಡಿ ಧರಿಸಿ ಅದರ ಮೇಲುಗಡೆ ಲುಂಗಿಯನ್ನು ಮಡಚಿ ಚಡ್ಡಿಗಿಂತ ಮೇಲೆ ಕಟ್ಟಿಕೊಂಡಿದ್ದ ಕುಂಜನನ್ನು ನೋಡಿ, ಅಷ್ಟು ಉದ್ದದಚೆಡ್ಡಿ ಧರಿಸಿದ ಮೇಲೆ ಕಾಟಾಚಾರಕ್ಕೊಂದು ಲುಂಗಿ ಕಟ್ಟಿಕೊಂಡಿರುವುದಾದರೂ ಯಾವ ಚಂದಕ್ಕೆಂದು ಕೇಳೋಣವೆಂದುಕೊಂಡರು ಸಹ, ಇನ್ನು ಆ ಪ್ರಶ್ನೆಗೂ ಸಹ ತಲೆಮಾರುಗಳ ಕತೆ ಹೇಳಿದರೆ ಕಷ್ಟವೆಂದು ಸುಮ್ಮನಾದರು.
ಆಸ್ವಾಲ್ಡ್ರು ತಮ್ಮ ಸಲಕರಣೆಗಳನ್ನೆಲ್ಲ ಸಿದ್ಧಪಡಿಸಿಕೊಂಡು ಕುಂಜನೊಡನೆ ಹೋರಾಡಲು ಅನುವಾಗುತ್ತಿದ್ದರು. ಅಷ್ಟರಲ್ಲೇ ಬಾಗಿಲು ಬಡಿದ ಸದ್ದು ಕೇಳಿ ಸಮಯ ನೋಡಿಕೊಂಡರು. "ಹೇಳಿದ ಸಮಯಕ್ಕೇ ಬಂದೆ ಬಿಟ್ಟನಲ್ಲ ಈ ಕುಂಜಎಂದುಕೊಳ್ಳುತ್ತ ...ಹಾ....ಬಂದೆ....ಬಂದೇ.." ಎನ್ನುತ್ತಾ ಬ್ಯಾಗೊಂದನ್ನು ಹೆಗಲಿಗೇರಿಸಿ ಕ್ಯಾಮೆರಾಒಂದನ್ನು ಕುತ್ತಿಗೆಗೆ ನೇತುಬಿಟ್ಟುಕೊಂಡು ಬಾಗಿಲು ತೆಗೆದು ನೋಡಿದರೆ ಮತ್ತೊಬ್ಬ ಆಗಂತುಕ ಎದುರು ನಿಂತು ಏದುಸಿರು ಬಿಡುತ್ತ "ವಿಶ್ವನಾಥ್ಬಂದಿದಾರ ಇಲ್ಲಿಗೆ...?" ಎಂದು ಆತಂಕದಿಂದ ಕೇಳಿದ.
"ಇಲ್ಲ...ನೀವ್ಯಾರು ಗೊತ್ತಾಗ್ಲಿಲ್ವಲ್ಲ " ಎಂದು ಕೇಳಿದ ಆಸ್ವಾಲ್ಡ್ರಿಗೆ "ನಾನು ರಮೇಶ್ ಗೌಡ ಅಂತ, ವಿಶ್ವನಾಥ್ ನಮ್ಮ್ ಮನೆಯಲ್ಲೇ ಬಾಡಿಗೆಗೆ ಇರೋದು. ನಿನ್ನೆ ರಾತ್ರಿ ನನ್ನ ಮಗನನ್ನ ಕರ್ಕೊಂಡು ಶಾಂಪುರ ಪೇಟೆಗೆಂದು ಹೋದವರುಇಲ್ಲಿಯವರೆಗೆ ಪತ್ತೆಯೇ ಇಲ್ಲ. ಫೋನ್ ಮಾಡಿದರು ಸುಳಿವಿಲ್ಲ. ನನ್ನ ಮಗನಿಗೂ ಕೂಡ ಆರೋಗ್ಯ ಸರಿಗಿಲ್ಲ. ಪಟೇಲರ ಮನೆಗೆ ಯಾವಾಗಲೂ ಬರುತ್ತಿದ್ದರು,ಹಾಗಾಗಿಯೇ ಇಲ್ಲಿಗೆ ಬಂದಿದ್ದರೇನೋ ಎಂದು ಕೇಳಲು ಬಂದೆ.ಪಟೇಲರು ನಿಮ್ಮಬಳಿ ಕಳಿಸಿದ್ದಾರೆ. ನಿಜ ಹೇಳಿ ಸ್ವಾಮಿ, ರಾತ್ರಿಯೆಲ್ಲ ನಿದ್ದೆಗೆಟ್ಟು ಹುಡುಕಿದ್ದಾಯ್ತು"ಎಂದು ದೈನ್ಯರಾಗಿ ಬೇಡಿಕೊಂಡರು ರಮೇಶ್ ಗೌಡ್ರು.
ಆಸ್ವಾಲ್ಡ್ರು ," ನಿನ್ನೇ ಅವರೇ ನನ್ನನ್ನು ಇಲ್ಲಿ ಬಿಟ್ಟು ಶಾಂಪುರಕ್ಕೆ ಹೋಗಬೇಕೆಂದು ಹೇಳಿ ಹೋದರು,ಮತ್ತೆ ಬರಲಿಲ್ಲ" ಎನ್ನುತ್ತಾ ತಮ್ಮ ಕ್ಯಾಮೆರಾ ಹೊರತೆಗೆದು ಅದರಲ್ಲಿದ್ದ ಫೋಟೋ ಒಂದನ್ನು ರಮೇಶ್ ಗೌಡ್ರ ಕಡೆ ತೋರಿಸಿ "ಇವರೇನಾನಿಮ್ಮ ಮಗ " ಎಂದು ಕೇಳಿದೊಡನೆ "ಹೌದು...!! ನೀವ್ಯಾರು ..?ನಿಮಗೆಲ್ಲಿ ಸಿಕ್ಕಿತು ಈ ಫೋಟೋ ...?" ಎನ್ನುತ್ತಾ ಗಾಬರಿಗೊಂಡರು.
"ನಿನ್ನೆಯ ದಿನದ ರಾತ್ರಿಯನ್ನು ನಾನು ನಿಮ್ಮ ಮನೆಯಲ್ಲೇ ಕಳೆದಿದ್ದೆ ನಾನು...ಅರ್ಥಾತ್ ನಿಮ್ಮ ಬಾಡಿಗೆ ಮನೆಯಾದ ವಿಶ್ವನಾಥರ ಮನೆಯಲ್ಲಿ..!! ನಿಮಗಿದು ಗೊತ್ತಿಲ್ಲವೇ " ಕೇಳಿದ ಆಸ್ವಾಲ್ಡ್ ಗೆ "ನಾನು ನಿಮ್ಮನ್ನು ನೋಡಿಯೇ ಇಲ್ಲ ,ನೀವುಅದೆಷ್ಟೊತ್ತಿಗೆ ಬಂದಿರಿ ನನಗೆ ಗೊತ್ತಿಲ್ಲ ....! ನೀವು ಇಲ್ಲಿರುವ ಬದಲು ನನ್ನ ಇನ್ನೊಂದು ಮನೆ ಕಾಲಿ ಇದೆ ಅಲ್ಲೇ ಇರಬಹುದಿತ್ತು ,ಪೇಟೆಗೆ ಹತ್ತಿರವೂ ಆಗುತ್ತಿತ್ತು ನಿಮಗೆ " ಎಂದ ರಮೇಶ್ ಗೌಡರಿಗೆ, ನಗುತ್ತಾ "ಏನು ಚಿಂತಿಸಬೇಡಿ ಇನ್ನೆರಡುದಿನದಲ್ಲಿ ಎಲ್ಲವೂ ಸರಿಯಾಗುತ್ತದೆ ನಿಶ್ಚಿತಂತೆಯಿಂದಿರಿ ,ನಾನು ಮಾತು ಕೊಡುತ್ತಿದ್ದೇನೆ ನೀವಿನ್ನು ಹೊರಡಿ ಎನ್ನುತ್ತಾ ಒಂದಷ್ಟು ಧೈರ್ಯ ಹೇಳಿ ಬೀಳ್ಕೊಟ್ಟರು.ಅಷ್ಟರಲ್ಲೇ ಕುಂಜ ತಮ್ಮೆಡೆಗೆ ನಡೆದು ಬರುತ್ತಿರುವುದನ್ನು ಕಂಡರು.
ಕುಂಜನ ಮಾರ್ಗದರ್ಶನ ಮೇಲೆ ಕಾಡಿನ ಹಾದಿ ಹತ್ತಿದ ಆಸ್ವಾಲ್ಡ್ ರು ತಾವು ಈ ಊರಿಗೆ ಕಾಳಿಂಗ ಸರ್ಪಗಳ ಕುರಿತು ಅಧ್ಯಾನಕ್ಕಾಗಿ ಬಂದ ವಿಚಾರ ತಿಳಿಸುತ್ತಲೆ ಮುಂದೆ ನಡೆಯುತ್ತಿದ್ದ ಕುಂಜ ಬೆಚ್ಚಿಬಿದ್ದು ಹಿಂತಿರುಗಿ ನಿಂತು"ಹೋಯ್.....ಎಂತ ನನ್ನ ತೆಗೀಬೇಕು ಅಂತ ಮಾಡಿರ್ಯ ..? " ಎನ್ನುತ್ತಾ ಈ ಕೆಲಸಕ್ಕೆ ನಾನು ಬರೋದಿಲ್ಲವೆಂದು, ಸರ್ಪ ದೋಷವಿದ್ದವರಿಗೆ, ಚೌಡಿ ತೊಂದರೆ ಇರುವವರಿಗೆ ಮಾತ್ರ ಆ ಹಾವುಗಳು ಕಾಣಿಸಿಕೊಳ್ಳುವುದೆಂದು, ಅಚಾನಕ್ಕಾಗಿಆ ಹಾವುಗಳು ಕಣ್ಣಿಗೆ ಬಿದ್ದರೆ ಗ್ರಾಚಾರ ಕೆಟ್ಟಂತೆಯೇ ಲೆಕ್ಕವೆಂದು ಆರೋಪಿಸಿದ. ಅದು ಅಲ್ಲದೆ ಮನುಷ್ಯನನ್ನು ಕಂಡರೆ ಕೇವಲ ಬಾಲದ ಮೇಲೆ ನೆಟ್ಟಗೆ ನಿಂತು ಅವು ನಮ್ಮನ್ನು ಹೆದರಿಸುತ್ತವೆಂದು ಒಮ್ಮೆ ಹಳ್ಳದ ಬದಿಯಲ್ಲಿ ಪಾಯಿಕಾನೆಗೆಕುಳಿತಿದ್ದಾಗ ತನಗೂ ಕೂಡ ಈ ಪರಿಸ್ಥಿತಿ ಎದುರಾಗಿ ಚೆಡ್ಡಿ ಲುಂಗಿ ಎಲ್ಲವನ್ನು ಅಲ್ಲೇ ಬಿಟ್ಟು ಮಾನ ಮರ್ಯಾದೆ ಮರೆತು ಮನೆಗೆ ಓಡಿ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಕಾಣಿಕೆ ಕಟ್ಟಿದ್ದೆನೆಂದು ತಿಳಿಸಿದ.ಮತ್ತು ಈ ಕೆಲಸಕ್ಕೆ ಶತಾಯ ಗತಾಯ ತಾನುಸಿದ್ಧವಿಲ್ಲವೆಂದ.
ಕುಂಜನ ಮಾತನ್ನು ಕೇಳಿ ನಕ್ಕ ಆಸ್ವಾಲ್ಡ್ ರು ಆತನ ಜೊತೆ ಹೆಚ್ಚಿನ ವಾದಕ್ಕಿಳಿಯದೆ "ಅಯ್ಯೋ ....ನಾವು ಹಿಡಿಯೋದು ಬೇಡ,ಕೇವಲ ಅವುಗಳು ಬದುಕುವ ಪ್ರದೇಶಗಳನ್ನು ಅಧ್ಯಯನ ಮಾಡೋದಷ್ಟೇ.ನೀವು ಇವತ್ತೊಂದಿನ ನನಗೆ ಸುತ್ತಮುತ್ತಲಿನ ದಾರಿ ತೋರಿಸಿದರೆ ಸಾಕು " ಎಂದು ಸ್ವಲ್ಪ ಆತ್ಮೀಯವಾಗಿ ಮಾತನಾಡುತ್ತ ಕುಂಜನ ಮನಸ್ಸನ್ನು ಬೇರೆಡೆ ಹರಿಸುವ ಸಲುವಾಗಿ "ಈ ಚನ್ನಕೇಶವ ಪಟೇಲರು ಹೇಗೆ ..?" ಎಂದು ಕೇಳಿದರು.
ಅದಕ್ಕೆ ಉತ್ತರವಾಗಿ ಕುಂಜನು "ನಾವ್ ಹೇಳಿದ್ರೆ ತಪ್ಪಾಗುತ್ತೆ . ದುಡ್ಡಿರೋರು ಏನ್ ಮಾಡುದ್ರು ಚಂದ ಅಂತಾರಲ್ಲ ಹಂಗೆ ಅವ್ರ್ ಕಥೆ. ಸಾಯ್ಲಿ ನಮಗೆ ಎಂತಕ್ಕೆ " ಎನ್ನುತ್ತಾ ಒಗಟಾಗಿ ಮಾತನಾಡಿ ಆಸ್ವಾಲ್ಡ್ ರನ್ನು ಮತ್ತಷ್ಟು ಕುತೂಹಲಕ್ಕೆ ಈಡುಮಾಡಿದ.
"ಅಯ್ಯೋ ಹೇಳಿ ಕುಂಜ ಅವ್ರೆ....ಸುಮ್ನೆ ಮಾತಿಗೆ ಕೇಳ್ತಿದಿನಿ. ಮಾತಾಡೋಕೇನ್ ದುಡ್ಡು ಕೊಡ್ಬೇಕೇ ..? ಅದು ಅಲ್ದೆ ನಾನೇನ್ ಇಲ್ಲೇ ಇರ್ತೀನ ಹೇಳಿ. ಎನ್ನುತ ಕುಂಜನ ಬಾಯಿ ತೆರೆಸುವ ಪ್ರಯತ್ನ ಮಾಡಿದರು.
ಜನ್ಮತಃ ಊರುಕೇರಿಯ ಜನರಿಂದೆಲ್ಲ ಏಕವಚನದಿಂದಲೇ ಕರೆಸಿಕೊಳ್ಳುತ್ತಿದ್ದ ಕುಂಜನಿಂಗೆ ಈ ಆಸ್ವಾಲ್ಡ್ ರು ಬಹುವಚನದಲ್ಲಿ ಸಂಭೋದಿಸುವುದನ್ನೂ ಕಂಡು ತನ್ನ ಮೇಲಿನ ಗೌರವ ತನಗೆ ಹೆಚ್ಚಿದಂತೆನಿಸಿ, ಕ್ರಿಸ್ತನ ಜಾತಿಯವರೆಂದು ನಿರ್ಲಕ್ಷ್ಯಮಾಡಿದ್ದಕ್ಕೆ ಬೇಸರಿಸಿಕೊಂಡು ಅವರೊಡನೆ ಆಪ್ತವಾಗಿ ಮಾತನಾಡುವುದೇ ತನಗೆ ಪಶ್ಚತ್ತಾಪದ ಕಟ್ಟಕಡೆಯ ದಾರಿಯೆನಿಸಿ ಮಾತಿಗಿಳಿದ.
"ತಾತ ಮುತ್ತಾತ ಮಾಡಿಟ್ಟಿರೋ ಆಸ್ತಿನ ನೋಡ್ಕೊಳೋ ಯೋಗ್ಯತೆನು ಇಲ್ಲ ಪಟೇಲರಿಗೆ , ಗದ್ದೆ ತೋಟಕ್ಕೆ ಕಾಲಿಟ್ಟು ಗೊತ್ತಿಲ್ಲ. ಅವ್ರ್ ಹಿರೀಕರು ಮಾಡಿಟ್ಟಿರೋ ಆಸ್ತಿ ಹಾಳಾಗಿದ್ದ ನೋಡಿದ್ರೆ ನಮಗೆ ಹೊಟ್ಟೆ ಉರಿತದೆ. ತಿಂಗಳಿಗೆ ಹದಿನೈದುದಿನಕ್ಕೆ ಒಬ್ರೇ ಕಾರ್ ತಗೊಂಡು ಬೆಂಗ್ಳೂರ್ ಪ್ಯಾಟೆ ಕಡೆ ಹೋದ್ರೆ ಒಂದು ವಾರ ಅಲ್ಲೇ ಠಿಕಾಣಿ. ಅಲ್ಲಿ ಕುಡಿಯೋದು ಇಸ್ಪೀಟ್ ಆಡೋದು ಹೆಂಗಸ್ರು ಸಾವಾಸ ಮಾಡ್ಕೊಂಡು ಇರೋದಂತೆ ...! ನಾನೇನ್ ಕಣ್ಣಗ್ ನೋಡಿಲ್ಲ , ನೋಡಿದವ್ರುಹೇಳಿದ್ದು. ಬೆಂಗ್ಳೂರಿಂದ ವಾಪಾಸ್ ಬರ್ತಾ ಬಟ್ಟೆ ಬರೇ ಅಂತ ಹೊತ್ಕೊಂಡ್ ಬಂದು ಮನೇಲಿ ಇರೋರ್ನೆಲ್ಲ ಸಮಾಧಾನ ಮಾಡ್ತಾರೆ. ಈ ಕಾಡುಬದಿ ಇರೋ ಅವರಿಗೆಂತ ಗೊತ್ತಾಗುತ್ತೆ ಪಾಪ. ಇಷ್ಟೆಲ್ಲ ಮಜಾ ಮಾಡೋಕೆ ದುಡ್ಡು ಎಲ್ಲಿಂದಅಂತ ಗೊತ್ತಿಲ್ಲ ನಮಗೆ. ಇವರ ಜೊತೆಗೆ ಆ ಕಳ್ಳಮುಂಡೇಮಗ ಆ ವಿಸ್ವನಾಥ. ಅವ್ನ್ ಮಕಾ ನೋಡುದ್ರೆ ಕತ್ತಿ ತಗೊಂಡು ಕಡಿಯಣ ಅಂತ ಕಾಣ್ತದೆ, ಕಂತ್ರಿ ಸೊಡ್ಡಿನವ್ನು . ಇವ್ರಿಬ್ರು ಬಾರಿ ದೋಸ್ತಿ. ಈ ಪಟೆಲ್ರುದ್ದು ಆ ವಿಸ್ವನಾತಂದು ಎಂತದೋವ್ಯವಾರ ಅಂತ ಕಾಣ್ತದೆ. ಈ ಪಟೇಲ್ರು ಜೊತೆ ಸೇರುದ್ಮೇಲೆ ವಿಸ್ವನಾತ ಕೂಡ ಒಳ್ಳೆ ದುಡ್ಡು ಮಾಡಿದಾನೆ. ಹೈಕ್ಲಾಸು ಮನೆ ಕಟ್ಟಿಸ್ತಾ ಇದಾನೆ. ಒಟ್ನಲ್ಲಿ ಹುಡಗುರಿಗೆ ಪಾಠ ಮಾಡುದ್ ಬಿಟ್ಟು ಬೇರೆ ಎಲ್ಲ ವಹಿವಾಟು ಮಾಡ್ತಾನೆ ಆ ಬೋಳಿಮಗ"ಎಂದು ಕೆಂಡ ಕಾರಿದನು ಕುಂಜ.
ಕುಂಜನ ಮಾತುಗಳನ್ನು ಕೇಳುತ್ತ ಆಸ್ವಾಲ್ಡ್ ರು ಬಂದ ಕಾರ್ಯವನ್ನು ಮರೆತು ಆತನ ಮಾತನ್ನೇ ಕೇಳುತ್ತ ನಿಂತರು. ಆಸ್ತಿ ಅಂತಸ್ತು ಜಾತಿ ವ್ಯವಹಾರ ಇನ್ನಿತರದ್ದರಲ್ಲಿ ಪಟೇಲರ ಮತ್ತು ವಿಶ್ವನಾಥರೊಡನೆ ಯಾವುದೇ ಸಂಬಂಧವು ಇಲ್ಲದ ಈಕ್ಷುದ್ರ ಜೀವಿಗೆ ಅವರ ಮೇಲೆ ಈ ಮಟ್ಟಿಗಿನ ದ್ವೇಷ ಏಕೆಂದು ತಿಳಿಯದೆ , ಕಾರಣವನ್ನು ಕೇಳಿಯೇ ಬಿಟ್ಟರು.
"ಎರಡು ತಿಂಗಳ ಹಿಂದೆ ಪಟೇಲರ ತಮ್ಮ ತೀರ್ಕೊಂಡ್ರು. ದೇವರಂತ ಮನುಷ್ಯ ಅವ್ರು .ಪಟೇಲರೇ ತನ್ನ ತಮ್ಮನನ್ನ ಕೊಂದು ಹೆಣವನ್ನು ಕಾಡಿಗೆ ತಗೊಂಡು ಹೋಗಿ ನೇಣು ಹಾಕಿಕೊಂಡು ಸತ್ತವರಂತೆ ಅವರ ಹೆಣವನ್ನು ಮರಕ್ಕೆ ನೇತುಹಾಕಿದ್ದಾರೆಂದು ಪುಕಾರು ಇದೆ. ಹೌದೋ ಸುಳ್ಳೋ ನಂಗು ಗೊತ್ತಿಲ್ಲ . ಆದ್ರೆ ಅವ್ರು ಸತ್ತ ದಿನ ಪೋಲಿಸಿನವರು ಬಂದಾಗ ಪಟೇಲರ ತಮ್ಮ ನೇಣು ಹಿಡಿದುಕೊಂಡು ಕಾಡಿಗೆ ಹೋಗುತ್ತಿದ್ದನ್ನು ನಾನು ನೋಡಿದ್ದೇ ಎಂದು ಪೊಲೀಸರಿಗೆಹೇಳಬೇಕೆಂದು ಇವರಿಬ್ಬರು ನನಗೆ ಹೆದರಿಸಿ ಹೋಗಿದ್ದರು. ಯಾಕೆ ಎಂದು ಕೇಳಿದಾಗ 'ಪೋಲಿಸಿನವರು ದುಡ್ಡು ಕೀಳೋಕಾಗಿ ಇದು ಆತ್ಮ ಹತ್ಯೆಯಲ್ಲ ಕೊಲೆ ಎಂದು ಜೀವ ಹಿಂಡುತ್ತಾರೆ ಎನ್ನುವ ಒಂದೇ ಕಾರಣಕ್ಕೆ' ಎಂದಿದ್ದರು. ಮಾಡಿರೋರುಅನುಭವಿಸ್ತಾರೆ ನಮಗ್ಯಾಕೆ ಹೇಳಿ. ಹೋಗೋರ್ ಹೋದ್ರು ಅಷ್ಟೇಯಾ" ಎನ್ನುತ್ತಾ ಮುಖ ಒಣಗಿಸಿ ಕಲ್ಲೊಂದರ ಮೇಲೆ ಕುಳಿತ ಕುಂಜ.
ಮದ್ಯಾನ್ಹದವರೆಗೆ ಕಾಡು ಸುತ್ತಿ ಊಟದ ಹೊತ್ತಿಗೆ ಇಬ್ಬರು ವಾಪಾಸ್ ಹೊರಟರು. ವಾಪಾಸ್ ಬರುವ ದಾರಿಯಲ್ಲಿ ಪಟೇಲರ ಮನೆಯ ಹತ್ತಿರದಲ್ಲಿ ಅಡಿಕೆ ತೋಟಕ್ಕೆ ಅಂಟಿಕೊಂಡಿದ್ದ ಕಾಡಿನ ಜಾಗಕ್ಕೆ ಸುಮಾರು ಎಂಟು ಅಡಿ ಎತ್ತರಕ್ಕೆವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿತ್ತು. ಬೇಲಿಯ ಸಾಲಿನೆಡೆಗೆ ಕಣ್ಣು ಹಾಯಿಸಿದ ಆಸ್ವಾಲ್ಡ್ಗೆ ಈ ಬೇಲಿಯೂ ಬಹುದೊಡ್ಡ ವಿಸ್ತೀರ್ಣವನ್ನು ಹೊಂದಿದಂತೆ ಕಂಡಿತು. "ಏನ್ರಿ ಇದು, ತೋಟಕ್ಕೆ ಬೇಲಿ ಹಾಕುವ ಬದಲು ಕಾಡಿಗೆ ಹಾಕಿದ್ದರಲ್ಲಯಾರದ್ದಿದು ತೋಟ? ಸರಕಾರದವರು ಬೇಲಿ ಹಾಕಿರೋದ ಕಾಡಿಗೆ ? " ಎಂದು ಕುಂಜನೆಡೆಗೆ ಕೇಳಿದೊಡನೆ.
" ಸರ್ಕಾರನು ಅಲ್ಲ ಎಂತದು ಅಲ್ಲ. ಆವಾಗ್ಲೇ ಹೇಳಿದ್ನಲ್ಲ ನಿಮಗೆ ,ಇದೇ ಪಟೇಲರ ತೋಟ. ದನ ಕರು ತಿಂದು ಅರ್ಧ ತೋಟದ ಕಥೆ ಮುಗ್ದಿದೆ.ಈ ಮನುಷ್ಯನಿಗೆ ಆ ಚಿಂತೆ ಇಲ್ಲ , ಅದ್ಬಿಟ್ಟು ಈ ಕಾಡೊಳಗೆ ಇವರ ಕುಟುಂಬಕ್ಕೆ ಸೇರಿರೋನಾಗರಬನ, ಚೌಡಿಬನ ಇದೆ ಅಂತೇಳಿ ಅಲ್ಲಿಗೆ ಇವ್ರು ಕುಟುಂಬದವ್ರ್ ಬಿಟ್ಟು ಬೇರೆ ಯಾರು ಸಹಿತ ಈ ಕಾಡೊಳಗೆ ಕಾಲಿಡಬಾರ್ದು ಅಂತ ಬೇಲಿ ಹಾಕ್ಸಿದ್ದಂತೆ. ಬೇರೆಯವರು ಹೋದ್ರೆ ಮೈಲಿಗೆ ಆಗುತ್ತೆ , ಆತರ ಮೈಲಿಗೆ ಆಗಿದ್ರಿಂದಾನೆ ನನ್ನತಮ್ಮ ತೀರಿಕೊಂಡಿದ್ದು ಅಂತ ಯಾರೋ ಮಂತ್ರವಾದಿ ಹೇಳಿದ್ದಾನೆ ಎಂದು ಊರಲ್ಲೆಲ್ಲ ಹೇಳಿ, ಊರಿನ ಪ್ರತಿ ಮನೆಗೂ ಹೋಗಿ ಯಾರು ಅದ್ರೊಳ್ಗೆ ಹೋಗೋದಿಲ್ಲ ಅಂತ ಪ್ರಮಾಣ ಮಾಡಿ ಅಂತ ಹೇಳಿ ಎಲ್ಲರತ್ರ ಪ್ರಮಾಣಮಾಡ್ಸ್ಕೊಂಡಿದಾರೆ. ಬೇರೆ ಕಸುಬಿಲ್ಲ ಇವ್ರಿಗೆ " ಎಂದ ನಿರ್ಲಕ್ಷ್ಯದಿಂದ ಕುಂಜ.
ಸರಿ ಹಾಗಾದರೆ ನಾನೇನು ಪ್ರಮಾಣ ಮಾಡಿಲ್ಲವಲ್ಲ, ಅದು ಅಲ್ಲದೆ ನಾನು ನಿಮ್ಮ ಜಾತಿಯವನು ಅಲ್ಲ .ಆದ್ದರಿಂದ ನಾನು ಬೇಲಿಯ ಒಳಗೆ ಹೋಗಬಹುದು ಎನ್ನುತ್ತಾ ಬೇಲಿ ಹಾರಲು ಅನುವಾದ ಆಸ್ವಾಲ್ಡ್ರನ್ನು ಕಂಡ ಕುಂಜ ಕಂಗಾಲಾಗಿ"ಅಯ್ಯೋ ದೇವ್ರೇ ಪಟೇಲರಿಗೆ ಗೊತ್ತಾದ್ರೆ ಗುಂಡು ಹಾಕ್ತಾರೆ ನಮ್ಮಿಬ್ರಿಗೂ ಸೇರ್ಸಿ.ದಯವಿಟ್ಟು ಆ ಕೆಲಸ ಮಾಡ್ಬೇಡಿ " ಎಂದು ಅಂಗಲಾಚಿದ.
ನೀವೇನು ತಲೆ ಕೆಡಿಸ್ಕೊಬೇಡಿ. ಸ್ವಲ್ಪ ಮುಂದೆ ಹೋಗಿ ಕದ್ದು ಕೂತ್ಕೊಳ್ಳಿ ಯಾರಿಗೂ ಕಾಣದ ಹಾಗೆ ಎನುತ್ತ ಕುಂಜನನ್ನು ದೂರ ಕಳಿಸಿ ಒಣಗಿದ ಮರದ ತುಂಡೊಂದನ್ನು ವಿದ್ಯುತ್ ಬೇಲಿಗೆ ಒರಗಿಸಿ ವಿದ್ಯುತ್ ಶಾಕ್ ಹೊಡೆಯುತ್ತಿಲ್ಲವೆಂದುಖಚಿತಪಡಿಸಿಕೊಂಡು ಬೇಲಿ ಹಾರಿ ಪಟೇಲರ ನಿಗೂಢತೆಯೊಳಗೆ ನಡೆದು ಬಿಟ್ಟರು ಹೆನ್ರಿ ಆಸ್ವಾಲ್ಡ್.
* * *
ಮರುದಿನ ಬೆಳಿಗ್ಗೆ ತಟ್ಟೆಯೆದುರು ತಿಂಡಿಗಾಗಿ ಕಾಯುತ್ತ ಚನ್ನಕೇಶವ ಪಟೇಲರೆದುರು ಕುಳಿತಿದ್ದ ಹೆನ್ರಿ ಆಸ್ವಾಲ್ಡ್ರಿಗೆ "ಹೇಗೆ ನಡೀತಿದೆ ರೀ ನಿಮ್ಮ ಅಧ್ಯಯನ ..? ಕಾಳಿಂಗ ಸರ್ಪಗಳೇನಾದರೂ ಕಂಡವೇ ನಿಮ್ಮ ಕಣ್ಣಿಗೆ ..?" ಎಂದು ನಗುತ್ತ ಕೇಳಿದಪಟೇಲರಿಗೆ "ಕಾಳಿಂಗ ಸರ್ಪವಂತೂ ಕಣ್ಣಿಗೆ ಬೀಳಲಿಲ್ಲ ಆದರೆ ಬಂದಿದ್ದಕ್ಕೆ ಮೋಸವಾಗಲಿಲ್ಲ ನೋಡಿ, ಸರಿಯಾದ ಹೆಬ್ಬಾವೊಂದು ಕಣ್ಣಿಗೆ ಬಿದ್ದಿದೆ " ಎನ್ನುತ್ತಾ ತಟ್ಟೆಗೆ ಬಂದು ಬಿದ್ದಿದ್ದ ದೋಸೆಗಳಲ್ಲಿ ಎರಡು ದೋಸೆಯನ್ನು ಪಟೇಲರ ತಟ್ಟೆಗೆಹಾಕಿ "ನೀವು ತಿನ್ನಿ ಪಟೇಲರೇ ...ನೀವು ಚನ್ನಾಗಿರ್ಬೇಕು" ಎಂದೊಡನೆ ,ಆಸ್ವಾಲ್ಡ್ ರ ಈ ವಿಶೇಷ ನಡತೆಯನ್ನು ಕಂಡ ಪಟೇಲರು ದಂಗಾಗಿ ಮಾತನ್ನು ಹೇಗೆ ಮುಂದುವರಿಸಬೇಕೆಂದು ತಿಳಿಯದೆ "ವಿಶ್ವನಾಥ್ ಎಲ್ಲಿಗೆ ಹೋಗಿದ್ದಾರೆಂದು ನನಗುಗೊತ್ತಿಲ್ಲ" ಎಂದುಬಿಟ್ಟರು. ಅಷ್ಟರೊಳಗೆ ಮನೆಯ ಹಿಂಬಾಗಿಲಿನಿಂದ ಬಂದ ಕೆಲಸದಾಕೆಯೊಬ್ಬಳು "ಅಯ್ಯ ...ಯಾರೋ ಬಂದಿದ್ದಾರೆ. ಬರಬೇಕಂತೆ ನೀವು" ಎಂದು ಕರೆದು ಹೋದಳು. ತಿಂಡಿ ಮುಗಿಸಿ ಆಸ್ವಾಲ್ಡ್ರೊಡನೆ ಜಗಲಿಗೆ ಬಂದಪಟೇಲರಿಗೆ ಅಂಗಳದಲ್ಲಿ ನಿಂತಿದ್ದ ಜೀಪು ಕಣ್ಣಿಗೆ ಬಿತ್ತು. ನಾಲ್ಕು ಜನ ಪರಿಚಯವಿರದ ವ್ಯಕ್ತಿಗಳು ಜೀಪಿನಿಂದ ಕೆಳಗಿಳಿದು ಹೆನ್ರಿ ಆಸ್ವಾಲ್ಡ್ ಕಡೆಗೆ ತಿರುಗಿ ಸೆಲ್ಯೂಟ್ ಮಾಡಿ ನಿಂತರು. ಜೀಪಿನ ಹಿಂಬದಿ ಸೀಟಿನಲ್ಲಿ ಕುಂಜ, ವಿಶ್ವನಾಥ್, ರಮೇಶ್ಗೌಡರು ಕುಳಿತಿದ್ದರು. ಜೀಪಿನ ಬಳಿ ನಿಂತಿದ್ದ ನಾಲ್ಕು ಜನರಿಗೆ ಪಟೇಲರನ್ನು ತೋರಿಸುತ್ತ "ಅರೆಸ್ಟ್ ಮಾಡಿ ಇವನನ್ನು " ಎಂದು ಆದೇಶವಿತ್ತ ಹೆನ್ರಿ ಆಸ್ವಾಲ್ಡ್ ಜೀಪಿನ ಹತ್ತಿರಕ್ಕೆ ನಡೆದು ಕುಂಜನನ್ನು ಮತ್ತು ರಮೇಶ್ ಗೌಡರನ್ನುಕೆಳಗಿಳಿಯುವಂತೆ ಹೇಳಿ , ಕುಂಜನನ್ನು ಹತ್ತಿರ ಕರೆದು ನಿನ್ನೆ ನನಗೆ ತೋರಿಸಿದ ಆ ಬೇಲಿ ಹಾಕಿದ ಕಾಡನ್ನು ಇವರಿಗೂ ತೋರಿಸು ಎಂದು ಹೇಳಿ "ಜೀಪಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಕುಂಜನ ಜೊತೆ ಹೋಗುವಂತೆ ಸೂಚಿಸಿ "ಅಲ್ಲಿರುವಗಾಂಜಾ ಗಿಡಗಳನ್ನೆಲ್ಲ ಸೀಸ್ ಮಾಡಿ ರಿಪೋರ್ಟ್ ಮಾಡಿ" ಎಂದು ಆದೇಶವಿತ್ತು , ರಮೇಶ್ ಗೌಡರ ಬಳಿ ನಡೆದು "ನಿಮ್ಮ ಮಗನಿಗಿದ್ದದ್ದು ಖಾಯಿಲೆಯಲ್ಲ . ಅವನಿಗಿದ್ದದ್ದು 'ವೀಡ್ ಅಡಿಕ್ಷನ್' ಅಂದರೆ ಆತ ಗಾಂಜಾ ವ್ಯಸನಿಯಾಗಿದ್ದ. ಅದಕ್ಕೆಕಾರಣ ಈ ವಿಶ್ವನಾಥ್ ಮತ್ತು ಚನ್ನಕೇಶವ ಪಟೇಲ್...! ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ನಮ್ಮ ಇಲಾಖೆ ವತಿಯಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಯು ಡೋಂಟ್ ವರಿ" ಎನ್ನುತ್ತ ಜೀಪಿನೊಳಗೆ ತಲೆಬಗ್ಗಿಸಿ ಕುಳಿತಿದ್ದವಿಶ್ವನಾಥ್ ಕಡೆಗೆ ತಿರುಗಿ "ನಿಮ್ಮಿಂದ ಬಹು ದೊಡ್ಡ ಉಪಕಾರವೇ ಆಯಿತು" ಎಂದರು ಹೆನ್ರಿ ಆಸ್ವಾಲ್ಡ್.
✍️ಸಚಿನ್ ಶೃಂಗೇರಿ
Comments
Post a Comment