ಸಂಬಂಧಿಕರನ್ನು  ಮಾರಿಬಿಡಿ...!!

"ಹಲೋ ....ಹಯವದನ ಅವ್ರು ಮಾತನಾಡ್ತಾ ಇರೋದಲ್ವಾ ..?"
"ಹೌದು, ನೀವ್ಯಾರು ..?"
"ಶುಭೋದಯ ಸಾರ್ ..!, ನಾವು 'ರಿಲೇಷನ್ಶಿಪ್.ಕಾಮ್' ಎಂಬ ಕಂಪನಿಯಿಂದ ಕರೆ ಮಾಡ್ತಿರೋದು. 'ಜಾಬ್ ಸ್ಕ್ವೆರ್.ಕಾಮ್' ಎನ್ನೋ  ವೆಬ್ಸೈಟ್ ಒಂದರಲ್ಲಿ ಕೆಲಸಕ್ಕಾಗಿ ನಿಮ್ಮ  ರೆಸ್ಯುಮೆ ಅಪ್ಲೋಡ್ ಮಾಡಿದ್ರಲ್ಲ ಸಾರ್, ಅದನ್ನ ನೋಡಿ ನಾವು ಕರೆ ಮಾಡ್ತಿರೋದು. ಇವತ್ತು ಬಂದು ಇಂಟರ್ವ್ಯೂ ಅಟೆಂಡ್ ಮಾಡ್ತೀರಾ ಸಾರ್ ..?"

"ಯಾವ್ ಥರ ಕೆಲಸ ಮೇಡಂ ..?"

"ನೀವ್ ಇಂಟರ್ವ್ಯೂಗೆ  ಬಂದ್ರೆ ಎಲ್ಲ ಗೊತ್ತಾಗುತ್ತೆ , ಇವತ್ತು ಬರ್ತೀರಾ ಅಂತಾದ್ರೆ  ಅಪಾಯಿಂಟ್ಮೆಂಟ್ ಫಿಕ್ಸ್ ಮಾಡ್ಕೋತೀನಿ "

"ಸರಿ ಮೇಡಂ, ಖಂಡಿತ ಬರ್ತೀನಿ, ಅಡ್ರೆಸ್ ಕಳಿಸಿಕೊಡಿ " ಎನ್ನುತ್ತಾ ಫೋನ್ ಕತ್ತರಿಸಿದ ಹಯವದನನಿಗೆ ತನ್ನನ್ನು ಇಂಟರ್ವ್ಯೂ ಗೆ ಕರೆದ ಕಂಪೆನಿಯ ಹೆಸರು ಕೇಳಿ ವಿಚಿತ್ರವೆನಿಸಿತು. ರಿಲೇಷನ್ಶಿಪ್.ಕಾಂ, ಅಂದರೆ ಮದುವೆ ಮಾಡಿಸುವ ಕಂಪೆನಿಯೊ ವೃದ್ದಾಶ್ರಮವೋ, ಯಾವ ಕರ್ಮವೋ ಏನೋ , ಅಕೌನ್ಟ್ಸ್ ,ಫೈನಾನ್ಸ್ ನಲ್ಲಿ ಕೆಲಸ ಮಾಡಬೇಕೆಂದುಕೊಂಡವನಿಗೆ ಅದೊಂದು ಬಿಟ್ಟು ಮತ್ತೆಲ್ಲ ತರಹದ ಆಫರ್ಗಳು ಬರುತ್ತಿವೆಯಲ್ಲಪ್ಪ ಎಂದುಕೊಂಡು, ಸಂದರ್ಶನಗಳ ಸಾಮಾನ್ಯ ಪ್ರಶ್ನೆಗಳನ್ನೆಲ್ಲ ಮನಸ್ಸಲ್ಲಿಯೇ ತಿರುವಿಹಾಕಿಕೊಂಡು ಸಂದರ್ಶನಕ್ಕೆ ಹೊರಡಲು ಅನುವಾಗುತ್ತಲೇ ಅಡ್ರೆಸ್ ನ ಸಂದೇಶ ಮೊಬೈಲ್ ಗೆ ಬಂದಿತ್ತು.

ಸಂದರ್ಶನ ನಿಗದಿಯಾಗಿದ್ದ ವಿಳಾಸಕ್ಕೆ ಬಂದು ತಲುಪಿದ ಹಯವದನ.ಅಂದುಕೊಂಡಷ್ಟು ಜನರು ಇರಲಿಲ್ಲ ಸಂದರ್ಶನದ ಸ್ಥಳದಲ್ಲಿ. ಇಬ್ಬರು-ಮೂವರು ಮಾತ್ರ ಗರಿ-ಗರಿಯಾದ ಬಟ್ಟೆಗಳನ್ನು ಧರಿಸಿ , ನೀಟಾದ ಮುಖ ಕ್ಷಾರ ಮಾಡಿ , ಕ್ರಾಪು ತೆಗೆದು ಕುಳಿತಿದ್ದರು ತಮ್ಮ ಸರದಿಗಾಗಿ. ಸೀದಾ ರಿಸೆಪ್ಶನ್ ಬಳಿ ನಡೆದ ಹಯವದನ ಸಂದರ್ಶನಕ್ಕೆ ಬಂದಿದ್ದೇನೆಂದು ತಿಳಿಸಿ ರೆಸ್ಯುಮೆ ಅವರ ಕೈಗಿತ್ತೋ ಡನೆ  ಕರೀತೀವಿ ಕುಳಿತುಕೊಳ್ಳಿ ಎಂದು ಕುರ್ಚಿಯತ್ತ ಕೈತೋರಿದರು. ಕುರ್ಚಿಯಯಲ್ಲಿ ಹೋಗಿ ಕುಳಿತಿದ್ದಂತೆ ಅಪ್ಪನ ಕರೆ ಬಂತು. "ಇಂಟರ್ವ್ಯೂ ಚನ್ನಾಗ್ ಮಾಡು,ಒಳ್ಳೆದಾಗಲಿ" ಎಂಬ ಮಾತು ಆಕಡೆಯಿಂದ ಕೇಳಿಬಂತು. ಹ -ಹೂ ಎಂದು ಕೂಡ ಹೇಳದ ಹಯವದನ, ಮೊಬೈಲ್ ನಲ್ಲಿ  ಗೂಗಲ್ ಪುಟ ತೆಗೆದು 'wmw.relationship.com’ ಎಂದು ಟೈಪಿಸುವಷ್ಟರಲ್ಲೇ ,
"ಮಿಸ್ಟರ್. ಹಯವದನ" ಎಂಬ ಕರೆ ಕೇಳಿಬಂತು. 
ಕರೆ ಕೇಳಿಸಿಕೊಂಡ ಹಯವದನ ತಡಬಡಾಯಿಸುತ್ತಲೇ ಎದ್ದು ಅವರು ತೋರಿದ ರೂಮಿನೆಡೆಗೆ ಕಾಲುಹಾಕಿದ.

"ವೆಲ್ಕಮ್ ಮೈ ಡಿಯರ್ ಯಂಗ್ ಮ್ಯಾನ್, ಪ್ಲೀಸ್ ಕೂತ್ಕೋಳಿ " ಎಂದು ಸ್ವಾಗತಿಸಿದ ಆ ಸಂದರ್ಶಕ "ಅಂದಹಾಗೆ ನಿಮ್ಮ್ ಊರು ಯಾವುದು, ಅಪ್ಪ ಅಮ್ಮ ಏನ್ ಮಾಡ್ತಿದಾರೆ,ಏನ್ ಓದಿದ್ದೀರಿ " ಎನ್ನುತ್ತಾ ಪ್ರಶ್ನೆಗಳ ಮಳೆಗರೆದ.

" ಸಾರ್ ಬಿಕಾಂ ಓದಿದಿನಿ, ನಮ್ ಊರು ಮಡಿಕೇರಿ, ಅಪ್ಪ ಊರಿನಲ್ಲೇ ಒಂದು ಅಂಗಡಿ ನಡೆಸ್ತಾ ಇದ್ರು, ಕಳೆದ ಎರಡು ತಿಂಗಳಿಂದ ಅಪ್ಪ ಅಮ್ಮ ಇಬ್ರು ಬೆಂಗ್ಳೂರಿಗೆ ಬಂದು ನನ್ ಜೊತೇನೆ ಇದಾರೆ." ಎಂದು ಉತ್ತರಿಸಿದ ಹಯವದನನಿಗೆ  "ಹೊ....ನೈಸ್...ವೆರಿ ಗುಡ್" ಉದ್ಗಾರ ತೆಗೆದ ಸಂದರ್ಶಕ "ನಮ್ ಕಂಪೆನಿ ಬಗ್ಗೆ ಏನ್ ಗೊತ್ತು ಎಂದು" ಕೇಳಿದ 
"ಸಾರ್, ಬೆಳಿಗ್ಗೆ ಯಾರೋ ನಿಮ್ಮವರು ಫೋನ್ ಮಾಡಿ ಹೇಳೋವರ್ಗು ಈ ಕಂಪೆನಿ ಹೆಸರು ನಾನು ಕೇಳಿರಲಿಲ್ಲ , ಒಂದ್ಸಾರಿ ಕೇಳಿದ್ಮೇಲೆ ಗೂಗಲ್ ನಲ್ಲಿ ಹುಡುಕಿ ನೋಡ್ದೆ , ಆದ್ರೆ ಯಾವುದೇ ಮಾಹಿತಿ ಕೂಡ ಸರಿಯಾಗಿ ಸಿಗ್ಲಿಲ್ಲ ,ಸಾರಿ ಸರ್" ಎಂದ ಹಯವದನ ಮುಖ ಸಪ್ಪೆ ಮಾಡಿಕೊಂಡು.
"ಇಟ್ಸ್ ಓಕೆ ಯಂಗ್ ಮ್ಯಾನ್, ನೋ ಪ್ರಾಬ್ಲಮ್. ಇವತ್ತಿನ ಮಾರ್ಕೆಟ್ನಲ್ಲಿ ಇದೊಂದು ಹೊಸ ಕಾನ್ಸೆಪ್ಟ್. ಇಂತ ಕಾನ್ಸೆಪ್ಟ್ ಯಾರು ಕೂಡ ಯೋಚ್ನೆ ಮಾಡಿಲ್ಲ ಇಲ್ಲಿಯವರೆಗೆ. ಈ ಕಂಪೆನಿಯ ಅವಶ್ಯಕತೆ ಹೆಚ್ಚಿನವರಿಗೆ  ಇದೆ ಮತ್ತು ಇನ್ನು ಕೆಲವೇ ವರ್ಷಗಳಲ್ಲಿ ನಮಗೆ ಒದಗಿ ಬರುವ ಬೇಡಿಕೆಗಳನ್ನ ಪೂರೈಸಲಾಗದಷ್ಟು  ಬೇಡಿಕೆ ಸೃಷ್ಟಿಯಾಗುತ್ತದೆ   ಈ ಕಾನ್ಸೆಪ್ಟ್ ಗೆ ಎಂಬ ಗ್ಯಾರೆಂಟಿ ಕೂಡ ನಮಗಿದೆ" ಎಂದ ಆ ಸಂದರ್ಶಕ.

ಸಂದರ್ಶಕನ ಮಾತು ಕೇಳಿ ಕಿವಿ ನಿಮಿರಿದ ಹಯವದನ "ಯಾವ್ದು ಸರ್ ಅದು ಅಂತ ಕಾನ್ಸೆಪ್ಟ್, ಈ ಕಂಪೆನಿಲಿ ನನ್ನ ಕೆಲಸ ಏನು ..?" ಎಂದು ಕೇಳಿದ.

"ಕಾನ್ಸೆಪ್ಟ್ ಇಷ್ಟೇ....ಸಂಬಂಧಗಳ ವ್ಯಾಪಾರ, ಐ ಮೀನ್ ಸೆಲ್ಲಿಂಗ್ ದಿ ರಿಲೇಷನ್ಶಿಪ್ಸ್ ....!!. ಕಾಲ ಬದಲಾಗಿದೆ ಕಣಯ್ಯಾ. ಕಾಲ ಬದಲಾಗ್ತಿರೋದನ್ನ ನೋಡಿ ಖುಷಿಪಟ್ಟವರೆಲ್ಲ ಇವತ್ತು ಕಸಿವಿಸಿ ಆಗೋ ಸಂದರ್ಭಕ್ಕೆ ನಿಂತು ಬಿಟ್ಟಿದ್ದಾರೆ. ಯಾವುದನ್ನ ವಿಜ್ಞಾನ ಆವಿಷ್ಕಾರ ಮಣ್ಣಂಗಟ್ಟಿ ಅಂತ ತಲೆ ಮೇಲೆ ಕೂರಿಸ್ಕೊಂಡರೋ ಈಗ ಅವುಗಳು ಆಡ್ಸೋ ಹಾಗೆ ಇವರು ಆಡ್ತಿದಾರೆ.ಹೊರಗೆ ಬರೋಕೆ ಆಗ್ತಿಲ್ಲ ಯಾರಿಗೂ ಸಹ. ಮನುಷ್ಯನಿಗೆ ಅಪ್ಪ ಅಮ್ಮ ಅಣ್ಣ ತಮ್ಮ ಹೆಂಡತಿ ಮಕ್ಕಳು ಎಲ್ಲ ಇದ್ದಾರೆ, ಆದರೆ ಆ ಸಂಬಂಧಗಳನ್ನು ಅನುಭವಿಸೋಕೆ ಆಗದೆ ಇರೋ ಪರಿಸ್ಥಿತಿ ಆತ ತಲುಪಿದ್ದಾನೆ. ಸಂಬಂಧಗಳು ಈ ಕಾಲಕ್ಕೆ ನೈಸರ್ಗಿಕವಾಗಿ ಉಳಿದಿಲ್ಲ , ಕೇವಲ ಕಾರಣಗಳ ಮೇಲೆ ನಿಂತಿವೆ ಅಷ್ಟೇ ಅದಕ್ಕೆ ಕಾರಣ ಹಣ ಅಧಿಕಾರ ಆಸೆ ದುರಾಸೆ ಅಸಾಹಾಯಕತೆ ಯಾವುದೂ ಕೂಡ ಆಗಿರಬಹುದು,ಎಂದು ಹೆಚ್ಚಿನವರಿಗೆ ತಿಳುವಳಿಕೆಗೆ ಬಂದಿದೆ, ತಿಳುವಳಿಕೆ ಬರದೇ ಇದ್ದವರಿಗೆ ತಿಳಿಸುವ ಕಾರ್ಯ ನಮ್ಮ ಕಂಪೆನಿ ಮಾಡುತ್ತದೆ. ನಾನು ನನ್ನದು, ನಾನೇ ಮಾಡಿದ್ದೂ ಎಂದು ಮೆರೆಯುವ ಮನುಷ್ಯ ಒಂದು ದಿನ ಇಷ್ಟೆಲ್ಲಾ ಮಾಡಿದ್ದು ಸಹ ಏನು ಪ್ರಯೋಜನವಾಗಲಿಲ್ಲ , ಯಾರಿಗೂ ನಾನು ಬೇಕಾಗಿರಲಿಲ್ಲ , ನನ್ನ ಕೈಕಾಲು ಗಟ್ಟಿ ಇದ್ದಾಗ ಎಲ್ಲರು ಚನ್ನಾಗಿದ್ರು ನನ್ನ ಜೊತೆ ಎಂಬ ನಿರ್ಧಾರಕ್ಕೆ ತಲುಪುತ್ತಾನೆ,ಅಂತಹ ವ್ಯಕ್ತಿಯೇ ನಮ್ಮ ಗ್ರಾಹಕ. ನೆಂಟರೆದುರು ಮದುವೆಯಾದ ತಪ್ಪಿಗೆ  ಮರ್ಯಾದೆ ಪ್ರಶ್ನೆಯಿಂದ ಒಟ್ಟಿಗಿರುವ ಗಂಡ ಹೆಂಡತಿಯರು, ಹುಟ್ಟಿಸಿದ ತಪ್ಪಿಗೆ ಜೊತೆಗಿರಿಸಿಕೊಂಡು ಅನ್ನ ಹಾಕುತ್ತಿರುವ ಅಪ್ಪ ಅಮ್ಮಂದಿರು, ಹುಟ್ಟಿದ ತಪ್ಪಿಗೆ  ಇವರನ್ನು ಸಾಕಬೇಕೆಂದುಕೊಳ್ಳುವ ಮಕ್ಕಳು, ಅಪ್ಪನ ಆಸ್ತಿಯ ಪಾಲುದಾರರಂತೆ ಒಬ್ಬರಿಗೊಬ್ಬರು ಬದುಕುವ  ಅಣ್ಣ -ತಮ್ಮ , ಅಕ್ಕ ತಂಗಿಯರೆಲ್ಲರೂ ಸಹ ನಮ್ಮ ಗ್ರಾಹಕರೇ. ಇವಿಷ್ಟೇ ಅಲ್ಲದೆ , ಹೆಣ್ಣುಮಕ್ಕಳಿದ್ದು ಛೇ ಒಂದು ಗಂಡು ಹುಟ್ಟಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅನ್ಕೋ ಳೋರು, ಅಣ್ಣ ತಮ್ಮ ಇರುವವನ್ನು ಛೇ ನನಗೆ ಅಕ್ಕ ತಂಗಿ ಇದ್ದಿದ್ದರೆ ಚನಾಗಿರ್ತಿತ್ತು ಅಂದ್ಕೊಳೋರು ಇದೆ ರೀತಿ ಹತ್ತು ಹಲವು ಸಂಬಂಧಗಳ ಜೊತೆ ಬದುಕಲು ಇಷ್ಟ ಪಡುವವರೆಲ್ಲ ನಮ್ಮ ಗ್ರಾಹಕರೇ...! 

ಇವರುಗಳೆಲ್ಲಾ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅವರಿಗೆಲ್ಲ ಯಾವ್ಯಾವ ತರಹದ ಸಂಬಂಧಗಳು ಬೇಕೆಂದು ಕೋರಿಕೆ ಸಲ್ಲಿಸುತ್ತಾರೆ . ಈಮೂಲಕವಾಗಿ 
ಅವರವರಿಗೆ ಬೇಕಾದ ಸಂಬಂಧಗಳಾಗಿ ಅವರ ಮನಮುಟ್ಟುವಂತೆ ಅವರ ಜೊತೆ ಅವರು ಇಷ್ಟಪಡುವಂತೆ ಅವರದೇ ಖರ್ಚಿನಲ್ಲೇ   ಬದುಕಿ ಆಯಾ ಸಂಬಂಧಗಳ ಖುಷಿಯನ್ನು ಅವರಿಗೆ ಬೇಕಾದಷ್ಟು ಕಾಲ ದೊರಕಿಸಿಕೊಡುವುದೇ ನಮ್ಮ ಕಂಪೆನಿಯ ಉದ್ಯೋಗಿಗಳ ಅಂದರೆ ನಿಮ್ಮೆಲ್ಲರ ಕೆಲಸ..ಪೇಮೆಂಟ್ ಬಗ್ಗೆ ತಲೆಕೆಡಿಸ್ಕೊಬೇಡಿ.....ಇವಾಗಾಗಲೇ ಮೂವತ್ತು ಜನ ಕೆಲಸ ಮಾಡ್ತಿದಾರೆ".ಎನ್ನುತ್ತಾ ಲ್ಯಾಪ್ಟಾಪ್ ಹೊರತೆಗೆದು "ಇವಳು ನೋಡಿ ಅಕ್ಷತಾ ಅಂತ ನಮ್ಮ ಕಂಪೆನಿ ಗೆ ಸೇರ್ಕೊಂಡು ಒಂದು ವಾರ ಆಯಿತು,ರಿಟೈರ್ಡ್ 'ಸಿ ಈ ವೊ' ಒಬ್ರಿಗೆ ಮಗಳಾಗಿ ಕೆಲಸ ಮಾಡ್ತಿದಾಳೆ . ಇವ್ರು ನಾಗರಾಜ ಅಂತ ನಿಮ್ಮೊರಿನ ಹತ್ತಿರದವ್ರೆ ಇಲ್ಲೇ ಸಾಫ್ಟ್ವೇರ್ ಎಂಜಿನಿಯರ್ ಒಬ್ರಿಗೆ ಅಣ್ಣ ಆಗಿ ಕೆಲಸ ಮಾಡ್ತಿದಾರೆ, ಮತ್ತೆ ಇವ್ರು ಶಶಿಕಲಾ ಅಂತ ಐವತ್ತು ವರ್ಷದ ಉದ್ಯಮಿ ಒಬ್ಬರಿಗೆ ತಂಗಿಯಾಗಿ ಕೆಲಸ ಮಾಡ್ತಿದಾರೆ. ಆ ಉದ್ಯಮಿಗೆ ಈ ಇಳಿವಯಸ್ಸಿನಲ್ಲಿ ತಂಗಿ ಅನ್ನೋ ಸಂಬಂಧ ನ ನೋಡ್ಬೇಕು ಅಂತ ನಮ್ ವೆಬ್ ಸೈಟ್ ನಲ್ಲಿ ರಿಕ್ವೆಸ್ಟ್ ಮಾಡ್ಕೊಂಡಿದ್ದ "'ಎನ್ನುತ್ತಾ ತನ್ನ ಕಂಪೆನಿಯ ಉದ್ಯೋಗಿಗಳ ಫೋಟೋಗಳನ್ನು ತೋರಿಸುತ್ತ ........ "ಹೇಗಿದೆ ನಮ್ಮ್ ಕಾನ್ಸೆಪ್ಟ್ ? ನೀವು ಏನಂತೀರಾ ...? " ಎನ್ನುತ್ತಾ ನಕ್ಕು, ಹಯವದನನ ಉತ್ತರಕ್ಕಾಗಿ ಹಂಬಲಿಸಿದ.

" ಸಾರ್,ನಂಗೆ ಏನ್ ಹೇಳ್ಬೇಕೋ ಗೊತ್ತಾಗ್ತಾ ಇಲ್ಲ , ಸ್ವಲ್ಪ ಸಮಯ ಕೊಡಿ ,ನಿಮಗೆ ಫೋನ್ ಮಾಡಿ ತಿಳಿಸುತ್ತೇನೆ. ನಾನು ಕೂಡ ಈ ಹೊಸ ಕಾನ್ಸೆಪ್ಟ್ ಕುರಿತು ಸ್ವಲ್ಪ ರಿಸರ್ಚ್ ಮಾಡಬೇಕು " ಎಂದು ಉತ್ತರಿಸಿ ವಾಪಾಸ್ ಮನೆ ಕಡೆಗೆ ಹೊರಟ.
ಮನೆಯೊಳಗೆ ಕಾಲಿಡುತ್ತಲೇ ಗೋಡೆಯ ಮೇಲಿದ್ದ ಕ್ಯಾಲೆಂಡರ್ ಗೋಡೆಯಿಂದ ಕಳಚಿಕೊಂಡು ಕೆಳ ಬಿದ್ದು ಹಯವದನನ ಕಾಲಿಗೆ ಸಿಕ್ಕಿತು. ಮತ್ತೆ ಅದನ್ನು ಗೋಡೆಗೆ ಸಿಕ್ಕಿಸಲೆಂದು ಕ್ಯಾಲೆಂಡರ್ ಎತ್ತಿಕೊಂಡ ಹಯವದನನಿಗೆ ಕ್ಯಾಲೆಂಡರ್ ನ ಹಿಂಬದಿಯಲ್ಲಿ ಬರೆದ ಆ ಸಾಲುಗಳನ್ನು ಕಂಡು "ಅರೇ ...ಇದು ಅಪ್ಪನದೇ ಕೈ ಬರಹವಲ್ಲವೇ ..!?" ಎಂದುಕೊಳ್ಳುತ್ತ ಓದಿದವನಿಗೆ ಕಂಡದ್ದು  'wmw.relationship.com’....!!!!!

✍️ಸಚಿನ್ ಶೃಂಗೇರಿ.

Comments

Popular posts from this blog