ರಿಸಲ್ಟ್_ಬಂತಾ ..?


ಒಂದನೇ ತರಗತಿಯಿಂದ ಒಂಬತ್ತನೇ ತರಗತಿವರೆಗೂ ಈ ಏಪ್ರಿಲ್ ಹತ್ತನೇ ತಾರೀಕು ನಮ್ಮ ಕಾಲದಲ್ಲಿ ನಮಗೆಲ್ಲರಿಗೂ ಹಿಗ್ಗಿನ ದಿನವೇ ಸರಿ. ಯಾಕೆಂದರೆ, ಈದಿನವೇ ತಾನೇ ಇದ್ದದ್ದು ನಮ್ಮ ಪರೀಕ್ಷಾ ಫಲಿತಾಂಶಗಳು. ಫಲಿತಾಂಶದಲ್ಲಿ ಫಲಿತವೆಷ್ಟೋ   ಅಫಲಿತವೆಷ್ಟೋ  ಇಂದಿಗೂ ಯೋಚಿಸಿಲ್ಲ ಆದರೆ ಆ ದಿನಕ್ಕೆ ಮಾತ್ರ ಅದರದ್ದೇ ಆದ ಸೊಬಗಿತ್ತು. ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಅನುತ್ತೀರ್ಣ ಮಾಡಬಾರದೆಂದು ಸರ್ಕಾರದ ನಿಯಮವಿದ್ದರೂ ಸಹ ಪರೀಕ್ಷೆ ಬರೆಯುವ ಸಮಯ ಹತ್ತಿರಾಗುತ್ತಿದ್ದಂತೆ    ನಮ್ಮ ಮಾಸ್ತರುಗಳು ಈ ವರ್ಷ ಕಾನೂನು ಬದಲಾಗಿದೆಯೆಂದು, ಫೇಲ್ ಮಾಡುವ ಅವಕಾಶವಿದೆಯೆಂದು , ಇಷ್ಟೇ ಅಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದರು ಸಹ , ಶಾಲೆಯಲ್ಲಿ  ಶಿಸ್ತಿನಿಂದ ಇಲ್ಲದಿದ್ದರೆ ಅಂತವರನ್ನು ಕೂಡ ಫೇಲ್ ಮಾಡುವ ಅವಕಾಶವಿದೆ ಎಂದು ಪ್ರತಿವರ್ಷವೂ ಒಂದು ಸುಳ್ಳನ್ನು ಹೇಳಿ ದಿಗಿಲಿಕ್ಕಿಸುತ್ತಿದ್ದರು, ನಾವು ಕೂಡ ಮಂಕರಂತೆ  ಮುಖ ಮಾಡಿಕೊಂಡು ಅವರ ಮಾತುಗಳನ್ನು ನಂಬುತ್ತಿದ್ದೆವು. 


ಏಪ್ರಿಲ್ ಹತ್ತನೇ ತಾರಿಕೀನ ಕ್ಷಣಗಣನೆ ಏಪ್ರಿಲ್ ಒಂದನೇ ತಾರೀಕಿನಿಂದಲೇ ಆರಂಭವಾಗಿರುತ್ತಿತ್ತು ನಮ್ಮ ಮನಸ್ಸಿನಲ್ಲಿ. ಮನೆಗೆ ಬರುವ ನೆಂಟರು ಇಷ್ಟರು , ಊರು ಕೇರಿಯವರು, ಬೇಸಿಗೆ ರಜೆಯಲ್ಲಿ  ದಿಕ್ಕುದೆಸೆ ದೆಸೆ ಇಲ್ಲದೆ  ಕಾಡು ಗುಡ್ಡ ತೋಟ ಹೊಳೆ-ಹಳ್ಳದ  ಬದಿ  ಬಿಸಿಲು ಮಳೆ ಎನ್ನದೆ ಪೋಲಿ ತಿರುಗುತ್ತಿದ್ದ ನಮ್ಮನ್ನು  ಮದುವೆಗೋ ಹಬ್ಬಕ್ಕೋ  ಬೇಸಿಗೆ ರಜೆ ಬಾ ಎಂದು ಕರೆದರೆ  "ಏಪ್ರಿಲ್ ಹತ್ತರವರೆಗೆ ಎಲ್ಲಿಗೂ ಬರಲ್ಲ , ರಿಸಲ್ಟ್ ಬರುತ್ತೆ " ಎಂದು ಹೇಳಿ ಯಾವುದೊ ಪರ್ವ ಕಾಲಕ್ಕೆ ಕಾದು ಕುಳಿತವರಂತೆ  ಅವರ ಕರೆಯೋಲೆಗಳನ್ನು ತಾತ್ಸಾರ ಮಾಡಿಬಿಡುತ್ತಿದ್ದೆವು. 
ಬೇಸಿಗೆ ರಜೆಯ ದೆಸೆಯಿಂದ ಮೂಲೆ ಸೇರಿದ್ದ  ಆಕಾಶನೀಲಿ ಬಣ್ಣದ  ಅಂಗಿ  ಕಡುನೀಲಿ ಬಣ್ಣದ ಚೆಡ್ಡಿ  ಏಪ್ರಿಲ್ ಹತ್ತರ ದಿನ ಮತ್ತೆ ಶಾಲೆ ಗೆ ಹೊರಡಲು ಸಿದ್ಧವಾಗುತ್ತಿದ್ದವು. "ಸರ್ಕಾರ ಕಾನೂನು ಮಾಡಿದೆ, ಯಾರನ್ನು ಫೇಲ್ ಮಾಡೋಹಾಗಿಲ್ಲ ಅಂತ, ಏನ್ ತಲೆ ಕೆಡಿಸ್ಕೊಬೇಡ , ಹೋಗಿ ರಿಸಲ್ಟ್ ನೋಡ್ಕೊಂಡ್ ಬಾ " ಎನ್ನುತ್ತಾ ಹತ್ತು ರೂಪಾಯಿ ಕೈಗಿತ್ತು ,  " ತಗೋ , ಚಾಕ್ಲೆಟ್ ತಿನ್ನು " ಎನ್ನುತ್ತಿದ್ದ ಅಮ್ಮನಿಗೆ  "ಈ ಸಲ ಆ ಕಾನೂನು ಇಲ್ಲ ಚನ್ನಾಗಿ ಓದಿ ಬರೆದವರು ಮಾತ್ರ ಪಾಸ್ ಆಗೋದು " ಎನ್ನುತ್ತ ಆತ್ಮಗೌರವ  ತೋರಿಸಿಕೊಂಡು  ಕೇಳದೆಯೇ  ಕೈಗೆ ಸಿಕ್ಕ ಹತ್ತು ರೂಪಾಯಿಯನ್ನು ಚೆಡ್ಡಿ ಜೇಬಿಗೆ ಸೇರಿಸಿ , ಶಾಲೆಯವರೆಗೂ ಒಂದು ಕೈಯನ್ನು ಜೇಬಿನಲ್ಲಿಟ್ಟುಕೊಂಡೇ ಓಡುತ್ತಿದ್ದೆವು. 
ನಮ್ಮ ಮಾಸ್ತರು ಎಲ್ಲ ತರಗತಿಯ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ರಿಸಲ್ಟ್ ಓದಿ ಹೇಳುತ್ತಿದ್ದರು. ನಮ್ಮನ್ನು ಕಿಚಾಯಿಸಲೆಂದೇ  ಕೆಲವರನ್ನು ಫೇಲ್ ಎಂದು ಘೋಷಿಸಿ ನಮ್ಮನ್ನು ತಬ್ಬಿಬ್ಬು ಮಾಡುತ್ತಿದ್ದರು. ಮಾಸ್ತರ ಮಾತು ನಂಬಿ, ಫೇಲಾದೆನೆಂದು ಮುಸಿ ಮುಸಿ ಅಳುತ್ತಿದ್ದ ಹುಡುಗಿಯರನ್ನು ನೋಡಿ ನಾವು ಹೆಮ್ಮೆ ಪಡುತ್ತಿದ್ದೆವು.  
ಕೊನೆಯಲ್ಲಿ ಎಲ್ಲರು ಪಾಸಾದರೆಂದು ತಿಳಿದಮೇಲೆ ಶಾಲೆಯ ಹೆಂಚುಗಳು ಹಾರುವಷ್ಟರ ಮಟ್ಟಿಗೆ ಕೇಕೆ ಹಾಕಿ ರಂಪ ಮಾಡುತ್ತಿದ್ದೆವು. ಇಷ್ಟರ ಮಧ್ಯೆ ಜೇಬಿನಲ್ಲಿದ್ದ ಹತ್ತು ರೂಪಾಯಿಯನ್ನು ಗಂಟೆಗೆ ಹತ್ತು ಬಾರಿ ಮುಟ್ಟಿ ನೋಡುತ್ತಿದ್ದೆವು, ಗ್ರಹಚಾರ ಕೆಟ್ಟು ನಮ್ಮ ಕೈಸಿಕ್ಕ ಆ ನೋಟು ನಮ್ಮ ಬೆವರಿನ ಅಂಗೈಗೆ ಸಿಲುಕಿ ಜಾಬ್ಬುಜಬ್ಬಾಗಿರುತ್ತಿತ್ತು.
ಶಾಲೆಗೆ ಹತ್ತಿರವಿದ್ದ ಅಂಗಡಿಗೆ ನುಗ್ಗಿ ಹತ್ತು ರೂಪಾಯಿಯನ್ನು ಹೇಗೆ ಉಡಾಯಿಸುವುದೆಂದು ತಿಳಿಯದೆ ಅಂಗಡಿಯಲ್ಲಿದ್ದ ತಿಂಡಿ ತಿನಿಸುಗಳನ್ನು  ಪಿಳಿ ಪಿಳಿ ನೋಡುತ್ತಾ ನಿಲ್ಲುತ್ತಿದ್ದೆವು. ನೀನ್ ಏನ್ ತಗೋತ್ಯಾ , ನಾನೇನ್ ತಗೊಳ್ಳಿ , ಅವ್ನಿಗ್ ಏನ್ ಬೇಕಂತೆ ಅನ್ನೋದ್ರಲ್ಲೇ ತುಂಬಾ ಹೊತ್ತು ಕಳೀತಿತ್ತು. ನಮ್ಮ ಕಾಲದಲ್ಲಿ ಅತ್ಯಂತ ಜನಪ್ರಿಯ ಎಂದರೆ 'ಹುಳಿ ಚಾಕ್ಲೆಟ್'. ರುಪಾಯಿಗೆ ನಾಲ್ಕು. ನಾವುಗಳು ಏನೆಲ್ಲಾ ಚರ್ಚೆ ಮಾಡುತ್ತಿದ್ದರು ಸಹ ಕೊನೆಗೆ ಕೈ ಇಡುತ್ತಿದ್ದುದು ಹುಳಿ ಚಾಕ್ಲೇಟಿಗೆ ಮಾತ್ರ. ಮಾಸ್ತರುಗಳಿಗೆ ಕೊಡಲೆಂದು ಮಾತ್ರ ಒಂದೋ ಎರಡು ಮೈಸೂರ್ ಪಾಕ್ ಅಷ್ಟೇ. ನಮ್ಮ ಖುಷಿ ನೋಡಿ ಒಂದೆರಡು ಚಾಕ್ಲೆಟ್ ಹೆಚ್ಚಿಗೆ ಕೊಟ್ಟು ಅಂಗಡಿಯಾತ ಕೂಡ ನಮ್ಮ ಖುಷಿಯೊಳಗೆ ಭಾಗಿಯಾಗುತ್ತಿದ್ದ .ಮೂವತ್ತು ನಲವತ್ತು ಚಾಕ್ಲೆಟ್ಗಳನ್ನೂ ಚೆಡ್ಡಿ ಜೇಬಿಗೆ ತುಂಬಿಕೊಂಡು ನಡೆಯುತ್ತಿದ್ದರೆ ಚೆಡ್ಡಿ ಎರಡು ಬದಿ ಊದಿಕೊಂಡು  ಈವಾಗಷ್ಟೇ ಕರು ಹಾಕಿರುವ ಎಮ್ಮೆಯ ಕೆಚ್ಚಲಿನಂತೆ ಅಲುಗಾಡುತ್ತಿತ್ತು.

 ಚೆಡ್ಡಿಯ ಜೇಬು ತೂಕ ತಾಳಲಾರದೆ ಜಗ್ಗಿ ಚೆಡ್ಡಿಗಿಂತ ಕೆಳಬಂದಿರುತ್ತಿತ್ತು. ನಾವೆಲ್ಲರೂ ಒಂದೇ ತರಹದ ಚಾಕ್ಲೆಟ್ ಕೊಂಡಿದ್ದರು ಸಹ ಅದನ್ನೇ ಒಬ್ಬರಿಗೊಬ್ಬರು ಹಂಚಿಕೊಂಡು ಸಂತಸಪಡುತ್ತಿದ್ದೆವು. ದಾರಿಯಲ್ಲಿ ಹೋಗುವವರನ್ನೆಲ್ಲ ಅಡ್ಡ ಹಾಕಿ ನಿಲ್ಲಿಸಿ ಚಾಕ್ಲೆಟ್ ಕೊಟ್ಟು ಖುಷಿ ಹಂಚುತ್ತಿದ್ದೆವು.ಚಾಕ್ಲೆಟ್ ಕೊಡದೆ ಇರೋರನ್ನು  , ಪಾಸ್ ಆಗಿರೋದಕ್ಕೆ ಚಾಕ್ಲೆಟ್ ಕೊಡಲೇ ಬೇಕೆಂದು ಕುಸ್ತಿ ಮಾಡಿ ಕಿತ್ತುಕೊಂಡು ತಿನ್ನುತ್ತಿದ್ದೆವು. ನಮ್ಮೆಲ್ಲರ ಕುಟುಂಬಗಳ ಆರ್ಥಿಕ ಸ್ಥಿತಿ ಒಂದೇ ಅಲ್ಲದಿದ್ದರೂ ಸಹ ನಮ್ಮಲ್ಲಿ ಬೇಧ ಭಾವವಿರಲಿಲ್ಲ . ಚಾಕ್ಲೆಟ್ ತಿನ್ನುವವರ ಮದ್ಯೆ ಕೇಕ್ ತಿನ್ನುವ ಅರ್ಹತೆಯುಳ್ಳವನು ಸಹ ಚಾಕ್ಲೇಟನ್ನೇ ತಿಂದು ನಮ್ಮೊಳಗೇ ಸೇರುತ್ತಿದ್ದ. ಅದು ಅವನ ದೊಡ್ಡತನವೆಂದು ಅವನಿಗೂ ಅನಿಸಿಲ್ಲ ನಾವು ಭಾವಿಸಿಲ್ಲ. ಮುಖ್ಯವಾಗಿ, ನನ್ನ ಗೆಳೆಯ ಅಥವಾ ನನ್ನ ಪರಿಚಯಸ್ತನನ್ನ  ನಾವು ಕಾಂಪಿಟಿಟರ್ ನಂತೆ ಪರಿಗಣಿಸಲಿಲ್ಲ . ಒಟ್ಟಿನಲ್ಲಿ ಇದ್ದಿದ್ದು ಮಾತ್ರ ನಿಷ್ಕಲ್ಮಷತೆ ಮತ್ತು ಸಂಭ್ರಮ.  ಚಿಕ್ಕದನ್ನು ಕೇಕೆ ಹಾಕಿ ಸಂಭ್ರಮಿಸುವ ಮುಗ್ದತೆ , ಮಿಂಚಿನ ಮನೋಬಲ. ಇಂದಿನ ದಿನಗಳಲ್ಲಿ ಮಕ್ಕಳು 98, 99 ಶೇಕಡಾ ಅಂಕಗಳನ್ನು ತೆಗೆದು ಜೋಭದ್ರ ಮೊರೆ ಹಾಕಿ ಕುಳಿತಿರುವುದು ನೋಡಿದರೆ ಅಯ್ಯೋ ಎನಿಸುತ್ತದೆ. ತಮ್ಮ ಗಳಿಕೆಯನ್ನೇ ಸಂಭ್ರಮಿಸದ ಈ ಮಕ್ಕಳು ಅದ್ಯಾವುದರಲ್ಲಿ  ಖುಷಿಪಡುವರೋ  ಎನ್ನುವುದು ಆ ದೇವರಿಗಾದರು ಗೊತ್ತೋ  ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ....!!?

-ಸಚಿನ್ ಶೃಂಗೇರಿ.

Comments

Popular posts from this blog