ಮಾರಿಕಣಿವೆಯ ಗುಪ್ತನಿಧಿ.


"ಏಯ್ ಸೋಂಬೇರಿಒಂದ್ ಹೊಂವರ್ಕ್ ಮಾಡ್ಕೊಂಡು ಬರೋಕೆ ಏನೋ ದಾಡಿ ನಿಂಗೆ ? ಕೈ ಮುಂದೆ ಹಿಡಿ , ನಿನ್ನ ಚರ್ಮ ಸುಲಿತೀನಿ ಇವತ್ತು " ಎನ್ನುತ್ತಾ  ರೂಲ್ ದೊಣ್ಣೆಯನ್ನು ಹಿಡಿದು ಗದರಿಸುತ್ತ ವಿದ್ಯಾರ್ಥಿಯೆಡೆಗೆ ನಡೆದಿದ್ದೆ ಅವತ್ತುಆತ ನಡುಗುತ್ತ ತನ್ನ ಎಡಗೈ ಮುಂದೆ ಚಾಚಿದ್ದ . ಎಡಗೈ ಹೆಬ್ಬೆರಳ ಬುಡದಿಂದ ಕಿರುಬೆರಳ ಕೊನೆಯವರೆಗೂ ಅಂಗೈನ ಮೇಲೆ ಬಲವಾಗಿ ಸೀಳಿದಂತೆ ಕಾಣುವ ಒಣಗಿದಗಾಯದ ಗುರುತುಎಳೆ ಅಂಗೈನ ಬಿಳಿ ಚರ್ಮದ ಮೇಲೆ ಗಾಯದ ಮೇಲೆ ತಬ್ಬಿಕೊಂಡಿದ್ದ ಕಪ್ಪು ವರ್ಣದ ಚರ್ಮದಾರ ಗಾಯವನ್ನೇ ನೋಡುತ್ತಾ  ಕೋಪವೆಲ್ಲ ಇಳಿಸಿಕೊಂಡು " ಇದೇನಾಗಿದ್ದು ..?"ಎಂದು ಕೇಳಿದ್ದೆ .
"ನಮ್ ಅಪ್ಪ ಬ್ಲೇಡ್ ನಲ್ಲಿ ಕುಯ್ದಿರೋದು ಸಾರ್ ನಾನ್ ಚಿಕ್ಕೋನ್ ಇದ್ದಾಗ " ಎಂದು ಸಾಮಾನ್ಯವಾಗಿಯೇ ಉತ್ತರಿಸಿದ .
"ಯಾಕೆ ಕುಯ್ದಿದ್ದು ...?" ಎಂದು ಕೇಳಿದೆ.
ನಮ್ಮೂರಲ್ಲಿ ಈತರ ಕೈಗೆ ಗಾಯ ಇಲ್ಲ ಅಂದ್ರೆ  ಮಕ್ಳನ್ನ ಕದ್ಕೊಂಡ್ ಹೋಗಿ ಹರಕೆಗೆ ಬಲಿ ಕೊಡ್ತಾರೆ ಸಾರ್ಅದ್ಕೆ ಕುಯ್ದಿರೋದು  " ಎಂದಅದಕ್ಕೆ ಧ್ವನಿಗೂಡಿಸಿದ ಉಳಿದ ಮಕ್ಕಳೆಲ್ಲರೂ ಹೌದು ಸಾರ್ಎನ್ನುತ್ತಾ ತಮ್ಮ ಕೈಗಳ ಮೇಲೆ ಮಾಡಿಕೊಂಡಿದ್ದ ಗಾಯದ ಗುರುತುಗಳನ್ನು ನನ್ನೆಡೆ ತೋರಿಸಿದರು
 ಕ್ಷಣಕ್ಕೆ ನನಗೇನು ತೋಚಲಿಲ್ಲಏನು ನೋಡಿಯೇ ಇಲ್ಲ ಎಂಬಂತೆಯಾವ ಪ್ರತಿಕ್ರಿಯೆಯನ್ನು ಸಹ ನೀಡದೆ ವಿದ್ಯಾರ್ಥಿಗಳೆದುರು ಸಹಜವಾಗಿ ವರ್ತಿಸಿ  ತರಗತಿ ಮುಗಿಸಿ  ಹೊರಬಂದೆ".
"ಇದು 1997 ಮಾತುದಾವಣಗೆರೆಯಿಂದ ವರ್ಗವಾಗಿ ಮಾರಿಕಣಿವೆಯ ಪ್ರಾಥಮಿಕ ಶಾಲೆಯ ಸರ್ಕಾರಿ ಶಿಕ್ಷಕನಾಗಿ ಕೆಲಸ ಪ್ರಾರಂಭಿಸಿದ ಎರಡನೆಯ ದಿನದ ಕಥೆ.
ನಾನೊಬ್ಬ ಅಪ್ಪಟ ನಾಸ್ತಿಕದೇವರು ದೆವ್ವ ಪೂಜೆ ಹರಕೆಗಳನ್ನು ನಂಬುವವನಲ್ಲ ಕ್ಷಣಕ್ಕೆ ಮಾರಿಕಣಿವೆಯ ಜನರ ಮೌಢ್ಯತೆ ನೋಡಿ ಕೋಪಗೊಂಡಿದ್ದೆಅವತ್ತಿನ ಮದ್ಯಾಹ್ನದ ತರಗತಿಗಳೆಲ್ಲ ಮುಗಿದನಂತರ  ನನ್ನ ಸಹೋದ್ಯೋಗಿ ಶಿಕ್ಷಕರಾದ ಶೇಖರಪ್ಪ ಎಂಬುವವರಲ್ಲಿ ತರಗತಿಯಲ್ಲಿ ನಡೆದ ಘಟನೆ ಕುರಿತು ಪ್ರಸ್ತಾಪಿಸಿದೆಅವರು ಆರು ವರ್ಷಗಳಿಂದ ಮಾರಿಕಣಿವೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು"ಎನ್ನುತ್ತಾ  ಪಧ್ಮನಾಭರು ವಿಸ್ಕಿ ಗ್ಲಾಸನ್ನು ಕೆಳಗಿರಿಸುತ್ತನಾಲಿಗೆಯ ಮೇಲೆ ಮಲಗಿದ್ದ ದುಬಾರಿ ಬೆಲೆಯ ವಿಸ್ಕಿಯ ಕಹಿಯನ್ನು ಕ್ಯಾಕರಿಸಿ ಸಿಗಾರ್ ಒಂದನ್ನು ತುಟಿ ಮದ್ಯೆ ಹಿಡಿದುಕೊಳ್ಳುತ್ತ ಮಾತುಮುಂದೆಣಿಸಿದರು.


ಇಂಗ್ಲೆಂಡ್   ಗ್ಲಾಸ್ಗೋ  ನಗರದ ರಿವರ್ ಕ್ಲೈಡ್ ನದಿ ತೀರದ ಐಷಾರಾಮಿ ಅಪಾರ್ಟ್ಮೆಂಟ್ ಒಂದರ ಮನೆಯೊಳಗೆ  ಕನ್ನಡದ ಯುವ ಸಾಹಸಿ ಪತ್ರಕರ್ತ ನೀರಜ್ ದೇಸಾಯಿ ಮತ್ತು ಮಾಸ್ಟರ್ ಪದ್ಮನಾಭರನಡುವೆ   ಸಂದರ್ಶನ -ಸಂಭಾಷಣೆ ನಡೆಯುತ್ತಿತ್ತುಸತತ ಐದು ವರ್ಷಗಳ ಪ್ರಯತ್ನದಿಂದ ನೀರಜ್ ದೇಸಾಯಿ ಪದ್ಮನಾಭರ ಎದಿರು ಕುಳಿತಿದ್ದಭಾರತೀಯ ಪತ್ರಕರ್ತರ ಕನಸು ಪದ್ಮನಾಭರ ಸಂದರ್ಶನಎನ್ನುವಂತಿತ್ತುಆದರೆ ಇವರೆಲ್ಲರ ಪಾಲಿಗೆ ಪದ್ಮನಾಭರು ಅಜ್ಞಾತರು

ಇಪ್ಪತ್ತು ವರ್ಷ ಹಳೆಯದಾದ ಜೀವಂತ ಕಥೆಯನ್ನು ಮುಂದುವರೆಸಿದರು ನೀರಜ್ ಪಾಲಿನ ಪದ್ಮನಾಭರು...!!

"ನಾನು ಆದಿನ ಮದ್ಯಾನ್ಹ ಶೇಖರಪ್ಪನವರ ಜೊತೆ ಕುಳಿತು ಊಟ ಮಾಡುತ್ತ ಕೇಳಿದೆ ತರಗತಿಯಲ್ಲಿ ನಡೆದ ವಿಷಯದ ಕುರಿತುಮಾಮೂಲಿ ಎನ್ನುವಂತೆ ತಿರುಗಿ ಮಾತನಾಡಿದರು ಶೇಖರಪ್ಪನವ್ರು"
"ಸಾರ್ ಊರಿನಲ್ಲಿ ಒಂದು ಮಾರಿಅಂದರೆ ಒಂದು ದೇವತೆಯ ದೇವಸ್ಥಾನವಿದೆಅದರಿಂದಲೇ  ಊರಿಗೆ ಮಾರಿಕಣಿವೆ ಅಂತ ಹೆಸರು ಬಂದಿರೋದು.ಅಲ್ಲಿ ಪ್ರತಿವರ್ಷವೂ ಹರಕೆ ನಡೆಯುತ್ತೆ , ಹರಕೆಅಂದರೆ ಕೋಳಿ ಕುರಿ ಎಲ್ಲ ಕುಯ್ತಾರೆ ಸರ್ ಮತ್ತೆ ಊರಿಗೆಲ್ಲ ಊಟ ಹಾಕ್ತಾರೆ , ಆದ್ರೆ ವಿಚಾರ ಇರೋದು ಇವಿಷ್ಟರಲ್ಲೇ ಅಲ್ಲ ಮಾರಿ ದೇವಸ್ಥಾನದ ಹತ್ತಿರ ಬೆಲೆ ಕಟ್ಟಲಾಗದಷ್ಟು ಬೆಲೆ ಬಾಳುವ ನಿಧಿಹುದುಗಿಸಿ ಇಟ್ಟಿದ್ದಾರೆ ಅನ್ನೋ  ಮಾತು ಇದೆ ನಿಧಿ ಇರೋ ಸ್ಥಳಾನು ಎಲ್ಲರಿಗೂ ಗೊತ್ತಿದೆ , ನಾನು ಕೂಡ ನೋಡಿದ್ದೀನಿಆದ್ರೆ  ನಿಧಿ ಪಡ್ಕೋಳೋಕೆ ಮೈ ಮೇಲೇ ಯಾವುದೇ ಗಾಯದ ಕಲೆ ಇಲ್ದೆ ಇರೋಮಕ್ಕಳನ್ನ ಸತತ ಮೂರು ವರ್ಷ ಬಲಿ ಕೊಟ್ಟು ,  ಬಲಿಕೊಟ್ಟ ಮಕ್ಕಳ ರಕ್ತವನ್ನ ನಿಧಿ ಇರೋ ಜಾಗದಲ್ಲಿ ಚೆಲ್ಲಬೇಕಂತೆಹಾಗೆ ಮಾಡಿದರೆ ಸುಲಭವಾಗಿ ನಿಧಿಯನ್ನು ಹೊರ ತೆಗೆಯಬಹುದಂತೆ .ಅದಕ್ಕಾಗಿಯೇ ಊರಿನಲ್ಲಿ ಮಕ್ಕಳು ಹುಟ್ಟಿ ಮೂರು ವರ್ಷ ಆಗೋದರೊಳಗೆ ಅವರ ಮೈಮೇಲೆ ಮಾಸದಂತ ಗಾಯ ಮಾಡುತ್ತಾರೆ,ತಮ್ಮ ಮಕ್ಕಳು ಬಲಿಯಾಗದಿರಲೆಂದುಎಂದಿದ್ದರು ಶೇಖರಪ್ಪನವರು ಆವತ್ತು.
"ಅಸಲಿಯತ್ತಿಗೆ ದೇವರನ್ನೇ ನಂಬದ ನಾನು ಅದ್ಯಾವ ಜಾಗ ಅಂತ ತೋರಿಸ್ರಿ , ನಾನು ನೋಡೇ ಬಿಡ್ತೇನೆ ಎಂದು ದುಂಬಾಲು ಬಿದ್ದಿದ್ದೆ

ಶೇಖರಪ್ಪನವರು ನನ್ನ ಒತ್ತಡಕ್ಕೆ ಮಣಿದು ಮರುದಿನ ಸಂಜೆ ಶಾಲೆ ಮುಗಿದ ಬಳಿಕ  ಸ್ಥಳಕ್ಕೆ ಕೊಂಡೊಯ್ದರು.'ಸುತ್ತಲೂ ಕಗ್ಗಾಡು , ದೂರದಲ್ಲೆಲ್ಲೋ ಹಳ್ಳ ಹರಿಯುವ ಸಪ್ಪಳಇಳಿಜಾರಿನಲ್ಲಿ ಸಾಗಿದ್ದೆವುದೂರದಲ್ಲಿ ಕಾಣುತ್ತಿದ್ದಬಯಲೊಂದನ್ನು ತೋರಿಸಿ "ಸಾರ್ ಅದೇ ನೋಡಿ ಮಾರಿ ದೇವಸ್ಥಾನಎಂದಿದ್ದರು ಶೇಖರಪ್ಪಹತ್ತಿರ ಸಾಗಿ ನಿಂತೆವುನಾನಂದುಕೊಂಡಿದ್ದಂತೆ ಯಾವುದೇ ದೇವಸ್ಥಾನದ ಆಕೃತಿಯಾಗಲಿಹೆಂಚಿನ ಹೊದಿಕೆಗಳಾಗಲಿಶಿಲೆಯ ಕಲ್ಲುಗಳಾಗಲಿಕಾಣಲಿಲ್ಲಬೃಹದಾಕಾರದ ಹಲಸಿನ ಮರದ ಕೆಳಗೆ ಆಕಾರವಿಲ್ಲದ ಎರಡು ಕಪ್ಪನೆಯ ಕಲ್ಲುಗಳಿದ್ದವು . ಸುತ್ತಲೂ ತರಗೆಲೆಗಳು ಮತ್ತು ಊದುಬತ್ತಿ,ಕರ್ಪೂರದ ಪ್ಲಾಸ್ಟಿಕ್ ಪ್ಯಾಕೆಟ್ಗಳು ಹರಡಿ ಬಿದ್ದಿದ್ದವುತಿರುಗಿ ಶೇಖರಪ್ಪನವರೆಡೆಗೆನೋಡಿದೊಡನೆ "ಸಾರ್ , ವರ್ಷಕ್ಕೆ ಒಂದು ಸಾರಿ ಮಾತ್ರ ಪೂಜೆ ನಡೆಯೋದು ಎಂದಿದ್ದರು".
"ನಿಧಿ ಇದೆ ಅನ್ನೋ  ಸ್ಥಳ ಎಲ್ಲಿ "ಎಂದು ನಾನು ಕೇಳಿದ್ದೆ ..!!.
"ಬನ್ನಿ ಸಾರ್ ಇಲ್ಲಿಎಂದು ನನ್ನ ಕರೆದೊಯ್ದಿದ್ದರು.
ಸುತ್ತ ಮುತ್ತಲಿನ ಜಾಗವೆಲ್ಲ ಗಿಡಗಂಟೆ ,ಹುಲ್ಲು ಪೊದೆಗಳಿಂದ ತುಂಬಿದ್ದರು ಸಹ  ಹತ್ತು ಅಡಿ ಅಂಗುಲದಷ್ಟು ಜಾಗ ಮಾತ್ರ ಬಳಿದಿಟ್ಟಂತೆ ಬಾಸವಾಗುತ್ತಿತ್ತುಒಂದೇ ಒಂದು ಸಸ್ಯ ಜೀವದ ಕುರುಹು ಕೂಡ ಇರಲಿಲ್ಲ. ಸ್ಥಳವನ್ನೇ ತೋರಿಸುತ್ತಶೇಖರಪ್ಪ "ನೋಡಿ ಸಾರ್, ಜಾಗದ ಕೆಳಗೆ ನಿಧಿ ಇರೋದ್ರಿಂದ ಅದ್ರ ಮೇಲೆ ಹುಲ್ಲು ಸಹ ಹುಟ್ಟಲ್ವಂತೆಅಲ್ಲಿರೋ ನಿಧಿಗಾಗಿ  ಊರಿನವರಷ್ಟೇ ಅಲ್ಲ ಕೇರಳದ ಬ್ಯಾರಿಗಳಿಂದ ಹಿಡಿದು ವಿದೇಶಿ ಏಜೆಂಟ್ ಎಲ್ಲರು ಸಹ ಹೊಂಚುನಡೆಸಿದ್ದಾರೆಯಾರು ಸಫಲರಾಗಿಲ್ಲಅಲ್ಲಿ ನಿಜವಾಗಿಯೂ ನಿಧಿ ಇದೆಯೋ ಇಲ್ಲವೋ ಎಂಬ ನಿರ್ಧಾರಕ್ಕೂ ಯಾರು ಬಂದಂತಿಲ್ಲ " ಎಂದರುಮತ್ತೆ  ಸ್ಥಳವನ್ನು ಬಿಟ್ಟು ನಾವು ವಾಪಾಸ್ ಹೊರಟಿದ್ದೆವು ಅವತ್ತು.
ನೀರಜ್ ದೇಸಾಯಿ ಮತ್ತು ಪದ್ಮನಾಭರ ಸಂಭಾಷಣೆ ಮುಂದುವರೆದಿತ್ತುಮಾತನಾಡುತ್ತಲೇ ಕುಳಿತಲ್ಲಿಂದ ಎದ್ದು ಮನೆಯ ಹೊರಾಂಗಣಕ್ಕೆ ಬಂದಿದ್ದರು.ಅಷ್ಟರಲ್ಲೇ ಧೀರಜ್ ಬಾಯಿಂದ "ಅರ್ರೇ ...ವ್ಹಾ " ಎಂಬ ಉದ್ಘಾರಇಬ್ಬರು ಹದಿನೈದುಚದರ ಅಡಿಯ ಫಿಶ್ ಟ್ಯಾಂಕ್ ಎದುರು ನಿಂತಿದ್ದರು.
"ಅಯ್ಯೋ  ಸಾರ್  'ಪಿರಾನ್ಹಾ ಫಿಶ್ ' ಆಲ್ವಾ ಸಾರ್ ಇವು ..?" ಕೇಳಿದ್ದರು ನೀರಜ್.
ಬೃಹದಾಕಾರದ,ನೀರು ತುಂಬಿಕೊಂಡಿರುವ ಗಾಜಿನ ಚೌಕಟ್ಟಿನೊಳಗೆ ಬೂದುಬಣ್ಣದ ಬಿಳಿಚುಕ್ಕಿಯರಾಕ್ಷಸ ದಂತಪಂಕ್ತಿಯ,ಎಂತಹ ಪ್ರಾಣಿಯನ್ನಾದರೂ ಕೆಲವೇ ಕ್ಷಣಮಾತ್ರದಲ್ಲಿ ತಿಂದು ಎಲುಬುಗಳನ್ನು ಉಳಿಸುವ,ಪ್ರಕೃತಿಯ ಅಚ್ಚರಿ ಮತ್ತುಅಪಾಯಕಾರಿಯಾದ,ನೂರಾರು ಸಂಖ್ಯೆಯ ಪಿರಾನ್ಹಾ(Piranha Fish) ಮೀನುಗಳನ್ನು  ಅಕ್ವೆರಿಯಂ ಒಳಗೆ ಇಡಲಾಗಿತ್ತು.
ನೀರಜ್ ಗೆ ಉತ್ತರವಾಗಿ  ಪದ್ಮನಾಭ್ "ಹಾ ...ಹೌದು.ಇವು ಪಿರಾನ್ಹಾ ಮೀನುಗಳೇ " ಎಂದೊಡನೆ , "ಇಷ್ಟೊಂದು ಮೀನುಗಳಿಗೆ ತಿನ್ನೋದಕ್ಕೆ ಏನ್ ಹಾಕ್ತಿರಾ ಸಾರ್ " ಎಂದು ಕೇಳಿದ ನೀರಜ್ ಗೆ , "ಇವತ್ತು ನೀವು ಬಂದಿದ್ದೀರಲ್ಲ,ಮೀನುಗಳಊಟದ ಚಿಂತೆ ಇಲ್ಲ ಬಿಡಿ..!! ಹ್ಹ ಹ್ಹ ಹ್ಹಾ " ಎಂದಿದ್ದರು ಪದ್ಮನಾಭ್ಇಬ್ಬರ ಗಹಗಹ ನಗು ಮನೆಯನ್ನು ಆವರಿಸಿತ್ತು . ಪಿರಾನ್ಹಾ ಮೀನುಗಳು ಹಲ್ಲು ಮಸೆಯುತ್ತಿದ್ದವುಪದ್ಮನಾಭರ ಕಥೆ ಮತ್ತೆ ಮುಂದುವರೆದಿತ್ತು.!



"ನನಗೇನೋ  ಸ್ಥಳದ ಮೇಲೆ ವಿಶೇಷ ಕುತೂಹಲವಿತ್ತು ಊರಿನವರ ಕಥೆ ಪುರಾಣಗಳ ಕಡೆ ಕಿವಿಗೊಡದೆ ವೈಜ್ಞಾನಿಕವಾಗಿ ಮುಂದುವರೆಯುವ ಪ್ರಯತ್ನ ಮಾಡಿದ್ದೆ ವಾರವೇ ಗೌರಿಬಿದನೂರು ತೆರಳಿ ನನ್ನ ಗೆಳೆಯ ಒಬ್ಬನಬಳಿಯಿಂದ 'ಮೆಟಲ್ ಡಿಟೆಕ್ಟಾರ್ ' ಯಂತ್ರವೊಂದನ್ನು ತಂದಿದ್ದೆ . ಯಂತ್ರವನ್ನು ಮಾರಿಕಣಿವೆಗೆ ತಂದ ಮರುದಿನವೇ ಶೇಖರಪ್ಪನವರಿಗೆ ವಿಷಯ ತಿಳಿಸಿ ನನ್ನೊಡನೆ  ಸ್ಥಳಕ್ಕೆ ಬರುವಂತೆ ಕೇಳಿಕೊಂಡಿದ್ದೆಶುದ್ಧ ದೈವಭಕ್ತರಾದ ಅವರು ಕಾರ್ಯಕ್ಕೆ ಸುತರಾಂ ಒಪ್ಪಲಿಲ್ಲ. "ದೇವರನ್ನು ಕೆಣಕಿ ಬದುಕುವುದುಂಟೆ ಸ್ವಾಮೀನೀವು ಹೇಳುವ ಕೆಲಸ ಅಷ್ಟು ಸುಲಭವಾಗಿದ್ದರೆ  ನಿಧಿ ಯಾವತ್ತೋ ಬೇರೆಯವರ ಕೈಪಾಲಾಗಿರುತ್ತಿತ್ತು " ಎಂದಿದ್ದರು ದಿನ ಶೇಖರಪ್ಪನವರನ್ನುಪುಸಲಾಯಿಸಿ , ಮನವೊಲಿಸಿ ನನ್ನ ಜೊತೆ ಬರುವಂತೆ ಮಾಡಿದ  ಪ್ರಯತ್ನಗಳು ಅಷ್ಟಿಷ್ಟಲ್ಲಕೊನೆಗೂ "ಸರಿ ನಾನು ಜೊತೆಗೆ ಬರುತ್ತೇನೆಯೇ ಹೊರತು ಯಾವುದಕ್ಕೂ ಕೈ ಹಾಕುವುದಿಲ್ಲಎಂದು ಷರತ್ತು ವಿಧಿಸಿ ನನ್ನ ಜೊತೆಯಾದರು.
ರಾತ್ರಿ ಸುಮಾರು ಹನ್ನೆರಡರ ಹೊತ್ತಿಗೆ ನಿಧಿ ಇದೆ ಎಂಬ ಸ್ಥಳ ತಲುಪಿದ್ದೆವು.ನಿರ್ಜನ ಪ್ರದೇಶನನಗಂತೂ ಒಂದು ಹನಿಯಷ್ಟು ಸಹ ಭಯವಿರಲಿಲ್ಲನಾನು 'ಮೆಟಲ್ ಡಿಟೆಕ್ಟರ್ ' ಹಿಡಿದು  ಜಾಗದ ತೀರಾ ಹತ್ತಿರಕ್ಕೆ ನಡೆದೆ . ಶೇಖರಪ್ಪನವರುಸ್ವಲ್ಪ ದೂರದಲ್ಲೇ ನಿಂತಿದ್ದರು ಬೋಳು ಜಾಗ ತಲುಪುತ್ತಿದ್ದಂತೆ ನನ್ನ ಕೈಯಲ್ಲಿದ್ದ ಯಂತ್ರ ಕೀ0....ಕೀಎನ್ನುತ್ತಾ ಒಂದೇ ಸಮನೆ ಕೂಗತೊಡಗಿತುನೆಲದಡಿ ಹುದುಗಿರುವ ಲೋಹದ ಸಿಗ್ನಲ್ ಸ್ಪಷ್ಟವಾಗಿತ್ತುಸಿಗ್ನಲ್ ಕ್ವಾಲಿಟಿ ಗಮನಿಸಿದರೆ ಲೋಹ ಅರ್ಥಾತ್  ನಿಧಿ ತುಂಬಾ ಆಳದಲ್ಲಿಲ್ಲ ಎನಿಸಿತ್ತುನಾನು ನಗೆಯಾಡುತ್ತ ಶೇಖರಪ್ಪನವರ ಕಡೆ ನೋಡಿದೆನನ್ನ ಮುಖದಲ್ಲಿ ಗೆಲುವಿನ ಮಂದಹಾಸ ಕಂಡ ಶೇಖರಪ್ಪನವರು  "ಬೇಡ ಸಾರ್ ಇಲ್ಲಿಗೆ ಬಿಟ್ಟಬಿಡೋಣ ಇದನ್ನ " ಎಂದುಅಂಗಲಾಚಿದ್ದರುನಾನು ಕೂಡ "ಸರಿ " ಎಂದಿದ್ದೆ  ಸಮಯಕ್ಕೆಮುಂದಿನ ಒಂದು ವಾರದಲ್ಲೇ ಶತಪ್ರಯತ್ನ ಮಾಡಿ ಅಮೇರಿಕದ ಸ್ಮಗ್ಲರ್ ಒಬ್ಬನನ್ನು ಸಂಪರ್ಕಿಸಿ ಎಲ್ಲ ವಿಷ್ಯ ತಿಳಿಸಿದ್ದೆಕೇವಲ ಮೂರೆ ದಿನಕ್ಕೆ ನನ್ನೆದುರು ಹಾಜರಾಗಿದ್ದ ಸ್ಮಗ್ಲರ್ ಮಾಲು ಎಲ್ಲಿದೆ ಎಂದು ಕೇಳಿದ್ದಆತನಿಗೆ ಶಿವಮೊಗ್ಗ  ಲಾಡ್ಜ್ ಒಂದರಲ್ಲಿ ತಂಗುವ ಏರ್ಪಾಟು ಮಾಡಿಹಾರೆ ಗುದ್ದಲಿ ಹಿಡಿದು ಶೇಖರಪ್ಪನವರೊಡನೆ ಮಾರಿಕಣಿವೆಯ  ಸ್ಥಳಕ್ಕೆ ಸಾಗಿದ್ದೇ
ಅಮಾವಾಸ್ಯೆಯ ದಿನವಾದ ಅಂದು ದೇವಸ್ಥಾನದ ಬಳಿ ಯಾರು ಸುಳುಯುವುದಿಲ್ಲವೆಂದು ತಿಳಿದು ನಾನು ಮತ್ತು ಶೇಖರಪ್ಪನವರು ಗುಂಡಿ ತೆಗೆಯಲು ಶುರುವಿಟ್ಟೆವುಇನ್ನೇನು ನಾಲ್ಕೈದು ಅಡಿ ಆಳ ತೆಗೆಯುವಷ್ಟರಲ್ಲೇ ಠಣ್ ಎಂಬಸದ್ದಾಗಿತ್ತು ನೆಲದಡಿಯಿಂದಒಳಗಿದ್ದ ಕಬ್ಬಿಣದ ಪೆಟ್ಟಿಗೆಯನ್ನು ಹೊರತೆಗೆದು ನೋಡಿ ದಿಗ್ಬ್ರಾಂತರಾದೆವುಶೇಖರಪ್ಪನವರು ಮಾರಿ ಕಡೆಗೆ ತಿರುಗಿ ಕೈಮುಗಿದು ನಿಂತರು.ನಾನು ತಡಗೊಡದೆ ಪೆಟ್ಟಿಗೆಯಲ್ಲಿದ್ದ  ಸಾವಿರರರು ಬಂಗಾರದನಾಣ್ಯಗಳನ್ನು ,ಸರಗಳನ್ನು ,ಮತ್ತೊಂದು ವಿಗ್ರಹವನ್ನು ಚೀಲಕ್ಕೆ ತುಂಬಿ, ಪೆಟ್ಟಿಗೆಯನ್ನು ಮೊದಲಿನಂತೆ ಹುದುಗಿಸಿಟ್ಟೆರಾತ್ರೋರಾತ್ರಿ ತಲೆಮಾರುಗಳಿಂದ ಕಗ್ಗಂಟಿನ ಕತೆಯಾಗಿದ್ದ ನಿಧಿ ನಮ್ಮ ಪಾಲಾಗಿತ್ತುಶೇಖರಪ್ಪನವರನ್ನು ಮನೆಗೆತಲುಪಿಸಿ  ರಾತ್ರಿಯೇ ನಾನು ಶಿವಮೊಗ್ಗಕ್ಕೆ ಬಂದಿಳಿದು  ಅಮೆರಿಕೀ ಸ್ಮಗ್ಲರ್ ಎದುರು ನಿಧಿ ಹಿಡಿದು ನಿಂತೇಚೀಲ ಬಿಚ್ಚಿ ನೋಡಿದ ಆತ "ಫೈವ್ ಬಿಲಿಯನ್ ಡಾಲರ್ .....ಇಸ್ ದಟ್ ಫೈನ್ ..?" ಎಂದು ಕೇಳಿದ್ದ . ನಾನು ತುಟಿಕ್ ಪಿಟಿಕ್ಎನ್ನಲಿಲ್ಲಮರುದಿನವೇ ಹಣಪಡೆದು ದೇಶಬಿಟ್ಟು ಇಂಗ್ಲೆಂಡ್ ಗೆ ಬಂದಿಳಿದೆಶೇಖರಪ್ಪನವರನ್ನು ಊರಿನವರು ಮರುದಿನ ವಿಷಯ ತಿಳಿದು ಹೊಡೆದು ಕೊಂದರೆಂದು ತಿಳಿದು ಬಂತುಎನ್ನುತ್ತಾ ಪದ್ಮನಾಭರು  "ಸರಿನಾನಿನ್ನು ಮಲಗುತ್ತೇನೆ,ನೀವು ವಿಶ್ರಾಂತಿ ತೆಗೆದುಕೊಳ್ಳಿ ,ಬೆಳಿಗ್ಗೆ ಮಾತನಾಡೋಣಹಾಗೆಯೆ ನಿಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವುದನ್ನೆಲ್ಲ ಅಳಿಸಿ ಬಿಡಿ ...!!" ಎನ್ನುತ್ತಾ ರೂಮಿನೊಳಗಡೆ ನಡೆದಿದ್ದರು.

ನೀರಜ್ ದೇಸಾಯಿ ಕಂಗಾಲಾಗಿ ನಿಂತಏನು ಮಾಡುವುದೆಂದು ತೋಚದೆ ತನ್ನ ರೂಮ್ ಸೇರಿಕೊಂಡಫೋನ್ ರಿಂಗಣಿಸಿತ್ತುಕರೆ ಸ್ವೀಕರಿಸಿದ ದೇಸಾಯಿ ಗೆ ಅತ್ತಕಡೆಯಿಂದ " ಹೇಲೋ ನೀರಜ್ನೀನು ಸಂದರ್ಶನ ಮಾಡೋಕ್ಕೆಹೋಗಿರೋದು ಪದ್ಮನಾಭ್  ಅಲ್ಲ , ಅವರ ಹೆಸರು ಶೇಖರ್ ನಿರಾಣಿ ಅಂತೇಪದ್ಮನಾಭ್ ಸತ್ತು ಇಪ್ಪತ್ತು ವರ್ಷ ಆಗಿದೆಯಂತೆಅವ್ರನ್ನ ಕೊಲೆ ಮಾಡಿರೋದು  ಅಂತ ಇಲ್ಲಿ ಕೇಸ್ ಫೈಲ್ ಆಗಿದೆ...ಹೆಲೋ ...ಹೆಲೋ ...." ಎನ್ನುತ್ತಾ ಕರೆಮುಕ್ತಾಯವಾಯ್ತುಮತ್ತೆ  ನಂಬರ್ ಗೆ ಕರೆ ಮಾಡಲು ನೀರಜ್ ಪ್ರಯತ್ನಿಸಿದತನ್ನ ರೂಮಿನ ಬಾಗಿಲು ತೆರದಂತಾಗಿ ಫೋನ್ನಲ್ಲಿ ಕರೆ ಕಟ್ ಮಾಡಿ ಫೋನನ್ನು ಜೇಬಿಗಿಳಿಸಿ ತಿರುಗಿ ನೋಡಿದ.

ಮರುದಿನ ಬೆಳಿಗ್ಗೆ  ಗ್ಲ್ಯಾಸ್ಗೋ  ನಗರದ  ಐಷಾರಾಮಿ ಮನೆಯ 'ಪಿರಾನ್ಹಾ ಫಿಶ್ ಟ್ಯಾಂಕ್ಒಳಗಡೆ  ಅಸ್ತಿಪಂಜರವೊಂದು ತೇಲುತ್ತಿತ್ತುಪಿರಾನ್ಹಾ ಮೀನುಗಳು ದಾಹ ತೀರಿಕೊಂಡಿದ್ದವು. 'ಬಾಲ್ವಿನಿ  ಫೋರ್ಟಿತ್ರೀ ಇಯರ್ ಓಲ್ಡ್ ' ವಿಸ್ಕಿಯ ಮತ್ತೊಂದು ಪೆಗ್ ಗ್ಲಾಸ್ ಸೇರಿತ್ತುರಿವರ್ ಕ್ಲೈಡ್ ನದಿ ಮತ್ತು   ಅಪಾರ್ಟ್ಮೆಂಟ್ನ ನಡುವೆ ಸಿಗಾರ್  ಹೋಗೆ ತಿಳಿಯಾಗಿ ಹರಡುತ್ತಿತ್ತು.

✍️ಸಚಿನ್ ಶೃಂಗೇರಿ.

Comments

Popular posts from this blog