ಸಂಬಂಧಿಕರನ್ನು ಮಾರಿಬಿಡಿ...!! @ wmw.relationship.com "ಹಲೋ ....ಹಯವದನ ಅವ್ರು ಮಾತನಾಡ್ತಾ ಇರೋದಲ್ವಾ ..?" "ಹೌದು, ನೀವ್ಯಾರು ..?" "ಶುಭೋದಯ ಸಾರ್ ..!, ನಾವು 'ರಿಲೇಷನ್ಶಿಪ್.ಕಾಮ್' ಎಂಬ ಕಂಪನಿಯಿಂದ ಕರೆ ಮಾಡ್ತಿರೋದು. 'ಜಾಬ್ ಸ್ಕ್ವೆರ್.ಕಾಮ್' ಎನ್ನೋ ವೆಬ್ಸೈಟ್ ಒಂದರಲ್ಲಿ ಕೆಲಸಕ್ಕಾಗಿ ನಿಮ್ಮ ರೆಸ್ಯುಮೆ ಅಪ್ಲೋಡ್ ಮಾಡಿದ್ರಲ್ಲ ಸಾರ್, ಅದನ್ನ ನೋಡಿ ನಾವು ಕರೆ ಮಾಡ್ತಿರೋದು. ಇವತ್ತು ಬಂದು ಇಂಟರ್ವ್ಯೂ ಅಟೆಂಡ್ ಮಾಡ್ತೀರಾ ಸಾರ್ ..?" "ಯಾವ್ ಥರ ಕೆಲಸ ಮೇಡಂ ..?" "ನೀವ್ ಇಂಟರ್ವ್ಯೂಗೆ ಬಂದ್ರೆ ಎಲ್ಲ ಗೊತ್ತಾಗುತ್ತೆ , ಇವತ್ತು ಬರ್ತೀರಾ ಅಂತಾದ್ರೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡ್ಕೋತೀನಿ " "ಸರಿ ಮೇಡಂ, ಖಂಡಿತ ಬರ್ತೀನಿ, ಅಡ್ರೆಸ್ ಕಳಿಸಿಕೊಡಿ " ಎನ್ನುತ್ತಾ ಫೋನ್ ಕತ್ತರಿಸಿದ ಹಯವದನನಿಗೆ ತನ್ನನ್ನು ಇಂಟರ್ವ್ಯೂ ಗೆ ಕರೆದ ಕಂಪೆನಿಯ ಹೆಸರು ಕೇಳಿ ವಿಚಿತ್ರವೆನಿಸಿತು. ರಿಲೇಷನ್ಶಿಪ್.ಕಾಂ, ಅಂದರೆ ಮದುವೆ ಮಾಡಿಸುವ ಕಂಪೆನಿಯೊ ವೃದ್ದಾಶ್ರಮವೋ, ಯಾವ ಕರ್ಮವೋ ಏನೋ , ಅಕೌನ್ಟ್ಸ್ ,ಫೈನಾನ್ಸ್ ನಲ್ಲಿ ಕೆಲಸ ಮಾಡಬೇಕೆಂದುಕೊಂಡವನಿಗೆ ಅದೊಂದು ಬಿಟ್ಟು ಮತ್ತೆಲ್ಲ ತರಹದ ಆಫರ್ಗಳು ಬರುತ್ತಿವೆಯಲ್ಲಪ್ಪ ಎಂದುಕೊಂಡು, ಸಂದರ್ಶನಗಳ ಸಾಮಾನ್ಯ ಪ್ರಶ್ನೆಗಳನ್ನೆಲ್ಲ ಮನಸ್ಸಲ್ಲಿಯೇ ತಿರುವಿಹಾಕಿಕೊಂಡು ಸ...